ADVERTISEMENT

ಹೆಸರಿನ ಗೊಂದಲ: ಜಾಮೀನು ಸಿಕ್ಕ ವ್ಯಕ್ತಿಯ ಬದಲಿಗೆ ಪೋಕ್ಸೊ ಆರೋಪಿ ಬಿಡುಗಡೆ

ಪಿಟಿಐ
Published 30 ಮೇ 2025, 7:22 IST
Last Updated 30 ಮೇ 2025, 7:22 IST
<div class="paragraphs"><p>ಜಾಮೀನು</p></div>

ಜಾಮೀನು

   

– ಎಐ ಚಿತ್ರ

ಫರಿದಾಬಾದ್: ಹೆಸರಿನ ಗೊಂದಲದಿಂದಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಬೇಕಿದ್ದ ಕೈದಿಯ ಬದಲಿಗೆ ಪೋಕ್ಸೊ ಕೈದಿಯನ್ನು ಜಿಲ್ಲಾ ಕಾರಾಗೃಹ ಆಡಳಿತವು ಬಿಡುಗಡೆ ಮಾಡಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ADVERTISEMENT

ಘಟನೆ ಬಳಿಕ ತನ್ನ ಗುರುತನ್ನು ಮರೆಮಾಡಿದಕ್ಕಾಗಿ ಪೋಕ್ಸೊ ಕೈದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಆತನಿಗಾಗಿ ಪೊಲೀಸರು ಹುಡುಕಾಟ ಪ್ರಾರಂಭಿಸಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಸದರ್ ಪೊಲೀಸ್ ಠಾಣೆಯ ಅಧಿಕಾರಿ ಉಮೇಶ್ ಕುಮಾರ್ ಹೇಳಿದ್ದಾರೆ.

ಒಂಬತ್ತು ವರ್ಷದ ಬಾಲಕನ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಆರೋಪದ ಮೇಲೆ 27 ವರ್ಷದ ನಿತೇಶ್ ಪಾಂಡೆ ಎಂಬಾತನನ್ನು 2021ರ ಅಕ್ಟೋಬರ್‌ನಲ್ಲಿ ಫರಿದಾಬಾದ್‌ನಲ್ಲಿ ಬಂಧಿಸಲಾಗಿತ್ತು. ಆತನ ತಂದೆಯ ಹೆಸರು ರವೀಂದರ್ ಪಾಂಡೆ.

ಇನ್ನೊಂದೆಡೆ 24 ವರ್ಷ ವಯಸ್ಸಿನ ನಿತೇಶ್ ಎಂಬಾತನನ್ನು ಮನೆ ಅತಿಕ್ರಮಣ ಮತ್ತು ಹಲ್ಲೆ ಆರೋಪದ ಮೇಲೆ ಕಳೆದ ಭಾನುವಾರ ಬಂಧಿಸಲಾಗಿತ್ತು. ಈತನ ತಂದೆಯ ಹೆಸರೂ ಕೂಡ ರವೀಂದರ್.

ಇಬ್ಬರೂ ವ್ಯಕ್ತಿಗಳನ್ನು ಫರಿದಾಬಾದ್‌ನ ನೀಮ್ಕಾ ಜೈಲಿನಲ್ಲಿ ಇರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಹಲ್ಲೆ ಆರೋಪ ಹೊತ್ತಿರುವ ನಿತೇಶ್‌ಗೆ ಫರಿದಾಬಾದ್ ನ್ಯಾಯಾಲಯ ಸೋಮವಾರ ಜಾಮೀನು ನೀಡಿತ್ತು. ಮಂಗಳವಾರ ಆತನನ್ನು ಜೈಲಿನಿಂದ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು, ಆದರೆ, ಅಧಿಕಾರಿಗಳು ಅತ್ಯಾಚಾರ ಆರೋಪಿ ನಿತೇಶ್ ಪಾಂಡೆಯನ್ನು ಬಿಡುಗಡೆ ಮಾಡಿದ್ದಾರೆ.

ನಿತೇಶ್ ಪಾಂಡೆ ತನ್ನ ಗುರುತನ್ನು ಮರೆಮಾಡುವ ಮೂಲಕ ಬಿಡುಗಡೆ ಹೊಂದಿದ್ದಾನೆ ಎಂದು ಜೈಲು ಆಡಳಿತ ಹೇಳಿದೆ.

‌ಗುರುತನ್ನು ಮರೆಮಾಚಿ ಬಿಡುಗಡೆಯಾಗಿದ್ದಕ್ಕೆ ನಿತೀಶ್ ಪಾಂಡೆ ವಿರುದ್ಧ ನಾವು ಸದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ ಎಂದು ಜೈಲು ಉಪ ಅಧೀಕ್ಷಕ ವಿಕ್ರಮ್ ಸಿಂಗ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.