ADVERTISEMENT

Farmers Protest | ರೈತ ಸಾವು: ಕೊಲೆ ಪ್ರಕರಣ ದಾಖಲಿಸಲು ಆಗ್ರಹ

ಮೃತ ರೈತನನ್ನು ‘ಹುತಾತ್ಮ’ ಎಂದು ಘೋಷಿಸಲು ರೈತ ಮುಖಂಡರ ಒತ್ತಾಯ

ಪಿಟಿಐ
Published 23 ಫೆಬ್ರುವರಿ 2024, 0:30 IST
Last Updated 23 ಫೆಬ್ರುವರಿ 2024, 0:30 IST
ಶಂಭು ಗಡಿಯಲ್ಲಿ ರಸ್ತೆಯಲ್ಲಿ ಕುಳಿತ ಗುರುವಾರ ರೈತರು ಪ್ರತಿಭಟನೆ ನಡೆಸಿದರು –ಎಎಫ್‌ಪಿ ಚಿತ್ರ
ಶಂಭು ಗಡಿಯಲ್ಲಿ ರಸ್ತೆಯಲ್ಲಿ ಕುಳಿತ ಗುರುವಾರ ರೈತರು ಪ್ರತಿಭಟನೆ ನಡೆಸಿದರು –ಎಎಫ್‌ಪಿ ಚಿತ್ರ   

ಚಂಡೀಗಢ: ಪಂಜಾಬ್‌– ಹರಿಯಾಣದ ಖನೌರಿ ಗಡಿಯಲ್ಲಿ ಪ್ರತಿಭಟನಾನಿರತ ರೈತನ ಸಾವಿಗೆ ಕಾರಣರಾದವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಹಾಗೂ ಮೃತ ರೈತನನ್ನು ‘ಹುತಾತ್ಮ’ ಎಂದು ಘೋಷಿಸಬೇಕು ಎಂದು ರೈತ ಮುಖಂಡರು ಗುರುವಾರ ಒತ್ತಾಯಿಸಿದ್ದಾರೆ.

ಈ ಸಂಬಂಧ ಪಂಜಾಬ್‌ ಸರ್ಕಾರ ಐಪಿಸಿ ಕಲಂ 302ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಬೇಕು. ಅಲ್ಲದೆ ಪಂಜಾಬ್‌ ಗಡಿ ಪ್ರವೇಶಿಸಿ 25–30 ಟ್ರ್ಯಾಕ್ಟರ್‌– ಟ್ರಾಲಿಗಳನ್ನು ಹಾನಿಗೊಳಿಸಿದ ಆರೋಪದ ಮೇಲೆ ಹರಿಯಾಣದ ಅರೆಸೈನಿಕ ಪಡೆಯ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ರೈತ ಮುಖಂಡ ಸರವಣ ಸಿಂಗ್‌ ಪಂಢೇರ್‌ ಆಗ್ರಹಿಸಿದರು.

ಖನೌರಿ ಗಡಿಯಲ್ಲಿ ಬುಧವಾರ ಪ್ರತಿಭಟನಾನಿರತ ರೈತರು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆಯಲ್ಲಿ ಯುವ ರೈತ ಶುಭಕರನ್‌ ಸಿಂಗ್‌ (21) ಮೃತಪಟ್ಟಿದ್ದರು. ಈ ವೇಳೆ 12 ಪೊಲೀಸರಿಗೂ ಗಾಯಗಳಾಗಿದ್ದವು. ರೈತನ ಸಾವಿನ ಬೆನ್ನಲ್ಲೇ ರೈತ ಮುಖಂಡರು ‘ದೆಹಲಿ ಚಲೋ’ ಪ್ರತಿಭಟನಾ ಮೆರವಣಿಗೆಗೆ ಎರಡು ದಿನಗಳ ಮಟ್ಟಿಗೆ ವಿರಾಮ ಘೋಷಿಸಿದ್ದರು.

ADVERTISEMENT

ಪಟಿಯಾಲದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಪಂಢೇರ್‌, ‘ಹರಿಯಾಣದ ಭದ್ರತಾ ಸಿಬ್ಬಂದಿ ಪಂಜಾಬ್‌ ವ್ಯಾಪ್ತಿಯೊಳಗೆ ಪ್ರವೇಶಿಸಿ ಖನೌರಿ ಗಡಿಯಲ್ಲಿ ರೈತರ ಮೇಲೆ ಬಲ ಪ್ರಯೋಗ ನಡೆಸಿದ್ದಾರೆ’ ಎಂದು ದೂರಿದರು.

‘ಪಂಜಾಬ್‌ ಸರ್ಕಾರವು ಶುಭಕರನ್‌ ಸಿಂಗ್‌ಗೆ ಹುತಾತ್ಮರ ಸ್ಥಾನಮಾನ ನೀಡಬೇಕು’ ಎಂದು ಎಸ್‌ಕೆಎಂ (ರಾಜಕೀಯೇತರ) ನಾಯಕ ಜಗಜೀತ್‌ ಸಿಂಗ್‌ ಡಲ್ಲೆವಾಲ್‌ ಆಗ್ರಹಿಸಿದರು.

ರೈತನ ಸಾವನ್ನು ಖಂಡಿಸಿ ಖನೌರಿ ಗಡಿ ಭಾಗದಲ್ಲಿನ ಮನೆಗಳು ಮತ್ತು ವಾಹನಗಳ ಮೇಲೆ ಕಪ್ಪು ಬಾವುಟಗಳನ್ನು ಹಾರಿಸುವಂತೆ ರೈತ ಮುಖಂಡರು ಇದೇ ವೇಳೆ ಕರೆ ನೀಡಿದರು.

ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಕೇಂದ್ರ ಸರ್ಕಾರ ತಕ್ಷಣವೇ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಬೇಕು ಎಂದು ಹರಿಯಾಣದ ವಿರೋಧ ಪಕ್ಷವಾದ ಕಾಂಗ್ರೆಸ್‌ ನಾಯಕರೂ ಆದ, ಮಾಜಿ ಮುಖ್ಯಮಂತ್ರಿ ಭೂಪಿಂದರ್‌ ಸಿಂಗ್‌ ಹೂಡಾ ಆಗ್ರಹಿಸಿದರು. 

ದೆಹಲಿ ವಿಧಾನಸಭೆ ಸಂತಾಪ:

ಖನೌರಿ ಗಡಿಯಲ್ಲಿ ಯುವ ರೈತ ಶುಭಕರನ್‌ ಸಿಂಗ್‌ ಸಾವಿಗೆ ದೆಹಲಿ ವಿಧಾನಸಭೆ ಗುರುವಾರ ಸಂತಾಪ ಸೂಚಿಸಿತು. ಸಂತಾಪ ಸಂದೇಶ ಓದಿದ ಸ್ಪೀಕರ್‌ ರಾಮ್‌ ನಿವಾಸ್ ಗೋಯೆಲ್‌ ಅವರು, ‘ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಶಾಂತಚಿತ್ತದಿಂದ ಕಾಣಬೇಕು. ಅವರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದರು.

ರೈತನ ಸಾವಿನಿಂದ ದುಃಖಿತನಾಗಿದ್ದೇನೆ. ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು

-ಭಗವಂತ್‌ ಮಾನ್‌ ಪಂಜಾಬ್‌ ಮುಖ್ಯಮಂತ್ರಿ

ಕಪ್ಪು ದಿನ ಟ್ರ್ಯಾಕ್ಟರ್‌ ಮೆರವಣಿಗೆ

ಚಂಡೀಗಢ: ರೈತನ ಸಾವಿಗೆ ಸಂತಾಪ ಸೂಚಿಸಲು ಶುಕ್ರವಾರ ‘ಕಪ್ಪು ದಿನ’ ಆಚರಿಸಲು ಸಂಯುಕ್ತ ಕಿಸಾನ್‌ ಮೋರ್ಚಾ (ಎಸ್‌ಕೆಎಂ) ಗುರುವಾರ ಘೋಷಿಸಿದೆ. ರೈತನ ಸಾವಿನ ಕುರಿತು ಕೊಲೆ ಪ್ರಕರಣ ದಾಖಲಿಸಬೇಕು ಎಂದೂ ಒತ್ತಾಯಿಸಿರುವ ಎಸ್‌ಕೆಎಂ ರೈತರು ಹೆದ್ದಾರಿಗಳಲ್ಲಿ ಇದೇ 26ರಂದು ಟ್ರ್ಯಾಕ್ಟರ್‌ ಮೆರವಣೆಗೆ ನಡೆಸುವಂತೆ ಕರೆ ನೀಡಿದೆ. ಅಲ್ಲದೆ ಮಾರ್ಚ್‌ 14ರಂದು ದೆಹಲಿಯಲ್ಲಿ ಮಹಾ ಪಂಚಾಯತ್‌ ನಡೆಸಲಾಗುವುದು ಎಂದೂ ಅದು ಹೇಳಿದೆ. ಕೃಷಿ ಕಾನೂನುಗಳನ್ನು ವಿರೋಧಿಸಿ 2020–21ರಲ್ಲಿ ನಡೆದ ರೈತರ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಸ್‌ಕೆಎಂ ಮುಖಂಡರು ಗುರುವಾರ ಸಭೆ ನಡೆಸಿ ಈ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಎಸ್‌ಕೆಎಂ ಮುಖಂಡ ಬಲ್ಬೀರ್‌ ಸಿಂಗ್‌ ರಾಜೇವಾಲ್ ರೈತನ ಸಾವಿನ ಕುರಿತು ಕೊಲೆ ಪ್ರಕರಣ ದಾಖಲಿಸಬೇಕು ಮತ್ತು ಅವರ ಕುಟುಂಬಕ್ಕೆ ₹ 1 ಕೋಟಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. 

ವಿಶೇಷ ಅಧಿವೇಶನಕ್ಕೆ ಕಾಂಗ್ರೆಸ್‌ ಆಗ್ರಹ

ನವದೆಹಲಿ: ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ತೀವ್ರಗೊಳಿಸಿರುವ ಕಾಂಗ್ರೆಸ್ ರೈತರ ಬೇಡಿಕೆಗಳ ಚರ್ಚೆಗೆ ಸಂಸತ್ತಿನ ವಿಶೇಷ ಅಧಿವೇಶನ ಕರೆಯುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ. ಇದೇ ರೀತಿ ಪಂಜಾಬ್‌ ಸರ್ಕಾರವು ರಾಜ್ಯ ವಿಧಾನಸಭೆಯ ವಿಶೇಷ ಅಧಿವೇಶನ ಕರೆದು ರೈತರ ವಿಷಯಗಳನ್ನು ಚರ್ಚಿಸುವಂತೆ ಕಾಂಗ್ರೆಸ್‌ ಒತ್ತಾಯಿಸಿದೆ. ‘ರೈತರು ಎಂಎಸ್‌ಪಿ ಗ್ಯಾರಂಟಿಗಾಗಿ ಆಗ್ರಹಿಸುತ್ತಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರು ‘ಗುಂಡು ಗ್ಯಾರಂಟಿ’ ನೀಡುತ್ತಿದ್ದಾರೆ. ರೈತರ ಮೇಲೆ ಅಶ್ರುವಾಯು ಶೆಲ್‌ಗಳನ್ನು ಪ್ರಯೋಗಿಸುತ್ತಿರುವುದು ಮತ್ತು ಗುಂಡುಗಳನ್ನು ಹಾರಿಸುತ್ತಿರುವುದು ಅನ್ಯಾಯದ ಪರಮಾವಧಿ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ. 

ಕುಟುಂಬಕ್ಕೆ ಆಧಾರವಾಗಿದ್ದ ಶುಭಕರನ್‌

ಚಂಡೀಗಢ: ರೈತರು ಮತ್ತು ಪೊಲೀಸರ ಘರ್ಷಣೆ ವೇಳೆ ಮೃತಪಟ್ಟ ಪಂಜಾಬಿನ ಬಠಿಂಡಾ ಜಿಲ್ಲೆಯ ಬಾಲೋಕೆ ಗ್ರಾಮದ ನಿವಾಸಿ ಶುಭಕರನ್‌ ಸಿಂಗ್‌ (21) ಕುಟುಂಬಕ್ಕಿರುವುದು ಕೇವಲ ಎರಡು ಎಕರೆ ಜಮೀನು ಎಂದು ಅವರ ನೆರೆಯವರು ತಿಳಿಸಿದ್ದಾರೆ. ಶುಭಕರನ್‌ ತಾಯಿ ಮೃತಪಟ್ಟಿದ್ದು ತಂದೆ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇಬ್ಬರು ಸಹೋದರಿಯರ ಪೈಕಿ ಒಬ್ಬರ ವಿವಾಹವಾಗಿದ್ದು ಇನ್ನೊಬ್ಬರು ಓದುತ್ತಿದ್ದಾರೆ. ತನ್ನ ಸಹೋದರಿಯ ಮದುವೆಗಾಗಿ ಯುವ ರೈತ ಸಾಲ ಮಾಡಿದ್ದ. ಕುಟುಂಬಕ್ಕೆ ತಾನೇ ಆಧಾರವಾಗಿದ್ದ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.