ADVERTISEMENT

ಮಾತುಕತೆಗೆ ಸರ್ಕಾರ ಸದಾ ಸಿದ್ಧ: ಒತ್ತಡ ಹೆಚ್ಚಿಸಿದ ರೈತರು

ಕಾಯ್ದೆಗಳಿಗೆ ಇನ್ನೊಂದು ಸಂಘಟನೆಯ ಬೆಂಬಲ

ಪಿಟಿಐ
Published 14 ಡಿಸೆಂಬರ್ 2020, 20:08 IST
Last Updated 14 ಡಿಸೆಂಬರ್ 2020, 20:08 IST
ದೆಹಲಿಯ ಟಿಕ್ರಿ ಗಡಿಯಲ್ಲಿ ನೂರಾರು ರೈತರು ಸೋಮವಾರ ಉಪವಾಸ ಸತ್ಯಾಗ್ರಹ ನಡೆಸಿದರು –ಪಿಟಿಐ ಚಿತ್ರ
ದೆಹಲಿಯ ಟಿಕ್ರಿ ಗಡಿಯಲ್ಲಿ ನೂರಾರು ರೈತರು ಸೋಮವಾರ ಉಪವಾಸ ಸತ್ಯಾಗ್ರಹ ನಡೆಸಿದರು –ಪಿಟಿಐ ಚಿತ್ರ   

ನವದೆಹಲಿ: ‘ರೈತರ ಜತೆ ಇನ್ನೊಂದು ಸುತ್ತಿನ ಮಾತುಕತೆ ನಡೆಯುವುದು ಖಚಿತ. ಅದರ ದಿನಾಂಕವನ್ನು ನಿಗದಿಪಡಿಸುವ ಸಲುವಾಗಿ ನಾವು ರೈತ ಮುಖಂಡರ ಜತೆ ಸಂಪರ್ಕದಲ್ಲಿದ್ದೇವೆ’ ಎಂದು ಕೇಂದ್ರದ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಹೇಳಿದ್ದಾರೆ.

ಮಾಧ್ಯಮ ಸಂಸ್ಥೆಯ ಜತೆಗೆ ಸೋಮವಾರ ಮಾತನಾಡಿದ ಅವರು, ‘ಮಾತುಕತೆಗೆ ಸರ್ಕಾರವು ಸದಾ ಸಿದ್ಧವಿದೆ. ಯಾವಾಗ ಮಾತುಕತೆಗೆ ಬರುತ್ತಾರೆ ಎಂಬುದನ್ನು ರೈತ ಮುಖಂಡರು ತಿಳಿಸಬೇಕು’ ಎಂದರು.

ಆದರೆ, ಪ್ರತಿಭಟನೆಯನ್ನು ತೀವ್ರಗೊಳಿಸಲು ನಿರ್ಧರಿಸಿರುವ ರೈತರು ಸಿಂಘು ಗಡಿಯಲ್ಲಿ ಬೆಳಿಗ್ಗೆ 8ರಿಂದ ಸಂಜೆ 5 ಗಂಟೆಯವರೆಗೆ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.

ADVERTISEMENT

ತೋಮರ್, ಕೇಂದ್ರದ ಸಚಿವರಾದ ಪೀಯೂಷ್‌ ಗೋಯಲ್‌ ಹಾಗೂ ಸೋಮ ಪ್ರಕಾಶ್‌ ಅವರ ನಿಯೋಗವು ರೈತರ ಜೊತೆ ಈಗಾಗಲೇ ಐದು ಸುತ್ತಿನ ಮಾತುಕತೆ ನಡೆಸಿದೆ. ಆದರೆ ಯಾವ ಸಭೆಯೂ ಫಲ ನೀಡಲಿಲ್ಲ.

ಕಾಯ್ದೆಗೆ ಬೆಂಬಲ: ಆಲ್‌ ಇಂಡಿಯಾ ಕಿಸಾನ್‌ ಕೊಆರ್ಡಿನೇಶನ್‌ ಕಮಿಟಿಯ ಪ್ರತಿನಿಧಿಗಳು ತೋಮರ್‌ ಅವರನ್ನು ಭೇಟಿಮಾಡಿ ಹೊಸ ಕೃಷಿ ಕಾಯ್ದೆಗಳಿಗೆ ಬೆಂಬಲ ಸೂಚಿಸಿದ್ದಾರೆ.

ಸೋಮವಾರದ ಬೆಳವಣಿಗೆಗಳು

* ಹರಿಯಾಣ ಹಾಗೂ ಪಂಜಾಬ್‌ನ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ರೈತರು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ

* ರೈತರ ಉಪವಾಸ ಸತ್ಯಾಗ್ರಹವನ್ನು ಬೆಂಬಲಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹಾಗೂ ದೆಹಲಿ ವಿಧಾನಸಭೆಯ ಸ್ಪೀಕರ್‌ ರಾಮನಿವಾಸ್‌ ಗೋಯಲ್‌ ಅವರೂ ಉಪವಾಸ ನಡೆಸಿದರು

* ಬಂಧಿತ ಪ್ರತಿಭಟನಕಾರರನ್ನು ಬಿಡುಗಡೆ ಮಾಡುವಂತೆ ಸರ್ಕಾರದ ಮುಂದೆ ಕಳೆದ ವಾರ ಬೇಡಿಕೆ ಇಟ್ಟಿದ್ದ ಭಾರತೀಯ ಕಿಸಾನ್‌ ಯೂನಿಯನ್‌, ಉಪವಾಸ ಸತ್ಯಾಗ್ರಹವನ್ನು ಬೆಂಬಲಿಸಲಿಲ್ಲ

* ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಜಾರಿಯಲ್ಲಿರುವುದನ್ನು ಖಚಿತಪಡಿಸಬೇಕು ಮತ್ತು ಅದಕ್ಕೂ ಕಡಿಮೆ ಬೆಲೆಗೆ ಕೃಷಿ ಉತ್ಪನ್ನಗಳನ್ನು ಖರೀದಿಸುವುದು ಕಾನೂನುಬಾಹಿರ ಎಂದು ಘೋಷಿಸಬೇಕು ಎಂದು ಆರ್‌ಎಸ್‌ಎಸ್‌ ಬೆಂಬಲಿತ ಸಂಘಟನೆ ಸ್ವದೇಶಿ ಜಾಗರಣ್‌ ಮಂಚ್‌ ಆಗ್ರಹಿಸಿದೆ

* ದೆಹಲಿಯ ಚಿಲ್ಲ ಗಡಿಯಲ್ಲಿ ಭಾರತೀಯ ಕಿಸಾನ್‌ ಯೂನಿಯನ್‌ (ಭಾನು) ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದೆ

‘ಪಾಕಿಸ್ತಾನಕ್ಕೆ ಹೋಗಿ’: ‘ಪ್ರತಿಭಟನಾನಿರತ ರೈತರನ್ನು ದೇಶದ್ರೋಹಿಗಳೆಂದು ಕರೆಯುವವರು ಸ್ವತಃ ದೇಶದ್ರೋಹಿಗಳಾಗಿದ್ದು ಅವರೆಲ್ಲರೂ ಪಾಕಿಸ್ತಾನಕ್ಕೆ ಹೋಗಬೇಕು’ ಎಂದು ಆಮ್‌ ಆದ್ಮಿ ಪಕ್ಷದ ವಕ್ತಾರ ರಾಘವ ಛಡ್ಡಾ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ದೆಹಲಿ ಘಟಕದ ವಕ್ತಾರ ವೀರೇಂದ್ರ ಬಬ್ಬರ್‌, ‘ಬಿಜೆ‍ಪಿಯೂ ಸೇರಿದಂತೆ ಎಲ್ಲರೂ ರೈತರನ್ನು ಬೆಂಬಲಿಸುತ್ತಾರೆ. ಆದರೆ, ‘ಪ್ರಧಾನಿಯನ್ನು ಕೊಲ್ಲಬೇಕು ಎನ್ನುವವರು ಮತ್ತು ದೇಶದ್ರೋಹದ ಆರೋಪದಡಿ ಬಂಧಿತರಾಗಿರುವವರನ್ನು ಬಿಡುಗಡೆ ಮಾಡಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸುವವರನ್ನು ಏನೆಂದು ಕರೆಯಬೇಕು’ ಎಂದು ಪ್ರಶ್ನಿಸಿದ್ದಾರೆ.

‘ಟ್ರೂಡೊ ಹೇಳಿಕೆ ಅನಪೇಕ್ಷಿತ’: ‘ರೈತರ ಪ್ರತಿಭಟನೆಯ ಬಗ್ಗೆ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರೂಡೊ ಅವರ ಹೇಳಿಕೆಯು ಅನಪೇಕ್ಷಿತ. ಆದರೆ ಈ ಹೇಳಿಕೆಯು ತಮ್ಮ ನಿಲುವನ್ನು ಇನ್ನಷ್ಟು ಗಟ್ಟಿಗೊಳಿಸಲು ರೈತರಿಗೆ ಪ್ರೇರಣೆಯಾಗಿ ಕೆಲಸಮಾಡಿದೆ’ ಎಂದು ಭಾರತದ ನಿವೃತ್ತ ರಾಜತಾಂತ್ರಿಕ ಅಧಿಕಾರಿಗಳ ಗುಂಪು ಹೇಳಿದೆ.

ವಿಷ್ಣುಪ್ರಕಾಶ್‌, ಅಜಯ್‌ ಸ್ವರೂಪ್‌, ಜಿ.ಎಸ್‌. ಅಯ್ಯರ್‌, ಎಸ್‌.ಕೆ. ಮಾಥುರ್‌ ಮುಂತಾದ ಮಾಜಿ ಅಧಿಕಾರಿಗಳನ್ನು ಒಳಗೊಂಡಿರುವ
ಗುಂಪು ಟ್ರೂಡೊ ಅವರಿಗೆ ಬಹಿರಂಗ ಪತ್ರ ಬರೆದಿದ್ದು, ‘ಮತಬ್ಯಾಂಕ್‌ ಗಟ್ಟಿಗೊಳಿಸಲು ಭಾರತದ ಆಂತರಿಕ ವಿಚಾರಗಳಲ್ಲಿ ಮೂಗು ತೂರಿಸುವುದು ಸ್ವೀಕಾರಾರ್ಹವಲ್ಲ. ಇದು ದ್ವಿಪಕ್ಷೀಯ ಸಂಬಂಧದ ಮೇಲೆ ಪರಿಣಾಮ ಬೀರಲಿದೆ’ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.