ADVERTISEMENT

ರೈತರ ಪ್ರತಿಭಟನೆ: ಬಿಕೆಯು ಮುಖ್ಯಸ್ಥ ಚಡೂನಿ ಸೇರಿದಂತೆ 9 ಮಂದಿ ಬಂಧನ

ಕನಿಷ್ಠ ಬೆಂಬಲ ಬೆಲೆಗೆ ಸೂರ್ಯಕಾಂತಿ ಬೀಜ ಖರೀದಿಗೆ ಒತ್ತಾಯ

ಪಿಟಿಐ
Published 7 ಜೂನ್ 2023, 11:38 IST
Last Updated 7 ಜೂನ್ 2023, 11:38 IST
ಗುರ್ನಾಮ್ ಸಿಂಗ್ ಚಡೂನಿ
ಗುರ್ನಾಮ್ ಸಿಂಗ್ ಚಡೂನಿ   

ಕುರುಕ್ಷೇತ್ರ (ಹರಿಯಾಣ, ಪಿಟಿಐ): ಸರ್ಕಾರವು ಸೂರ್ಯಕಾಂತಿ ಬೀಜಗಳನ್ನು ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಖರೀದಿಸಬೇಕು ಎಂದು ಒತ್ತಾಯಿಸಿ ರೈತರು ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದ್ದು, ಪ್ರತಿಭಟನನಿರತರಾಗಿದ್ದ ಭಾರತೀಯ ಕಿಸಾನ್ ಯೂನಿಯನ್‌ನ (ಚಡೂನಿ ಬಣ) ಅಧ್ಯಕ್ಷ ಗುರ್ನಾಮ್ ಸಿಂಗ್ ಚಡೂನಿ ಸೇರಿದಂತೆ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. 

ಚಡೂನಿ ನೇತೃತ್ವದಲ್ಲಿ ರೈತರು ಇಲ್ಲಿನ ಶಹಾಬಾದ್ ಬಳಿ ಮಂಗಳವಾರ 6 ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ತಡೆ ನಡೆಸಿದರು. ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಪ್ರಯೋಗಿಸಿ, ಲಾಠಿ ಚಾರ್ಜ್ ನಡೆಸಿದರು.

‘ಮಂಗಳವಾರ ಸಂಜೆ 9 ಮಂದಿಯನ್ನು ಬಂಧಿಸಲಾಗಿದ್ದು, ಬಳಿಕ ಅವರ ವಿರುದ್ಧ ವಿವಿಧ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಗಲಭೆ, ಕಾನೂನುಬಾಹಿರ ಸಭೆ ಮತ್ತು ಸರ್ಕಾರಿ ನೌಕರನ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಲು ಕ್ರಿಮಿನಲ್ ಬಲವನ್ನು ಬಳಸಿದ ಆರೋಪಗಳನ್ನು ರೈತ ಮುಖಂಡರ ವಿರುದ್ಧ ಹೊರಿಸಲಾಗಿದೆ’ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ. 

ADVERTISEMENT

ಪ್ರತಿಭಟನೆಗೆ ಸಂಬಂಧಿಸಿದಂತೆ 24 ಪ್ರತಿಭಟನಕಾರರನ್ನು ಮಂಗಳವಾರ ರಾತ್ರಿಯೇ ಬಿಡುಗಡೆ ಮಾಡಲಾಗಿದೆ. ಬಿಕೆಯುನ 9 ನಾಯಕರನ್ನು ಬುಧವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಕುರುಕ್ಷೇತ್ರದ ಪೊಲೀಸ್ ಅಧೀಕ್ಷಕ ಎಸ್.ಎಸ್. ಭೋರಿಯಾ ತಿಳಿಸಿದ್ದಾರೆ. 

ಈ ನಡುವೆ ಬಂಧಿತರಾಗಿರುವ ಎಲ್ಲ ರೈತರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕೆಲವು ರೈತರು ಧಾನ್ಯ ಮಾರುಕಟ್ಟೆ ಬಳಿಯ ಶಹಬಾದ್-ಲದ್ವಾ ರಸ್ತೆಯಲ್ಲಿ ಜಮಾಯಿಸಿದರು. ರೈತರಿಗೆ ಬೆಂಬಲ ಸೂಚಿಸಲು ಬಿಕೆಯು ಮುಖಂಡ ರಾಕೇಶ್ ಟಿಕಾಯತ್ ಶಹಾಬಾದ್‌ಗೆ ಭೇಟಿ ನೀಡುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಆ ಪ್ರದೇಶದಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.