ADVERTISEMENT

‘ಬೂದು ಪಟ್ಟಿ’ಯಲ್ಲಿ ಪಾಕ್‌ ಮುಂದುವರಿಕೆ

ಎಫ್‌ಎಟಿಎಫ್‌ ಸೂಚಿಸಿದ ಅಂಶಗಳ ಅನುಷ್ಠಾನದಲ್ಲಿ ವಿಫಲ

ಪಿಟಿಐ
Published 22 ಜೂನ್ 2019, 19:45 IST
Last Updated 22 ಜೂನ್ 2019, 19:45 IST
   

ನವದೆಹಲಿ: ಭಯೋತ್ಪಾದನೆಗೆ ಹಣಕಾಸು ನೆರವು ಒದಗಿಸುವುದರ ಮೇಲೆ ನಿಗಾ ಇಡುವ ಅಂತರರಾಷ್ಟ್ರೀಯ ಸಂಸ್ಥೆ ಹಣಕಾಸು ನಿಗಾ ಕಾರ್ಯಪಡೆ (ಎಫ್‌ಎಟಿಎಫ್‌) ಪಾಕಿಸ್ತಾನವನ್ನು ‘ಬೂದು ಪಟ್ಟಿ’ಯಲ್ಲಿ ಮುಂದುವರಿಸಲು ನಿರ್ಧರಿಸಿದೆ.

ಅಮೆರಿಕದ ಫ್ಲಾರಿಡಾದಲ್ಲಿ ಇತ್ತೀಚೆಗೆ ಒಂದು ವಾರ ಕಾಲ ನಡೆದ ಎಫ್‌ಎಟಿಎಫ್‌ನ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಎಲ್‌ಇಟಿ, ಜೆಇಎಂ ಹಾಗೂ ಇತರ ಭಯೋತ್ಪಾದಕ ಸಂಘಟನೆಗಳಿಗೆ ಹಣ ಪೂರೈಕೆಯಾಗುವುದಕ್ಕೆ ಕಡಿವಾಣ ಹಾಕುವಲ್ಲಿ ಪಾಕಿಸ್ತಾನ ವಿಫಲಗೊಂಡಿರುವ ಕಾರಣ ಸಂಸ್ಥೆ ಈ ನಿರ್ಧಾರ ಕೈಗೊಂಡಿದೆ.

ADVERTISEMENT

ತಾನು ನೀಡಿರುವ 27 ಅಂಶಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸೆ. 27ರ ವರೆಗೆ ಕಾರ್ಯಪಡೆ ಗಡುವು ಸಹ ನೀಡಿದೆ ಎಂದು ಮೂಲಗಳು ತಿಳಿಸಿವೆ.

‘ತನ್ನ ನೆಲದಿಂದ ಭಯೋತ್ಪಾದಕ ಚಟುವಟಿಕೆಗಳನ್ನು ನಿರ್ಮೂಲನೆ ಮಾಡುವ ಸಂಬಂಧ ಪರಿಣಾಮಕಾರಿಯಾದ, ನಂಬಲರ್ಹ ಹಾಗೂ ಯಾವುದೇ ಕಾರಣಕ್ಕೂ ಮಾರ್ಪಡಿಸಲು ಸಾಧ್ಯವಾಗದ ರೀತಿಯ ಕ್ರಮ ತೆಗೆದುಕೊಳ್ಳುತ್ತದೆ ಎಂಬುದು ನಮ್ಮ ನಿರೀಕ್ಷೆ’ ಎಂದು ಸಂಸ್ಥೆಯ ವಕ್ತಾರ ಹೇಳಿದ್ದಾರೆ.

ಅಮೆರಿಕ, ಬ್ರಿಟನ್‌ ಹಾಗೂ ಫ್ರಾನ್ಸ್‌ನಂತಹ ಎಫ್‌ಎಟಿಎಫ್‌ನ ಪ್ರಮುಖ ಸದಸ್ಯ ರಾಷ್ಟ್ರಗಳು, ಉಗ್ರ ಸಂಘಟನೆಗಳ ಮುಖಂಡರಾಧ ಹಫೀಜ್‌ ಸಯೀದ್‌, ಮಸೂದ್‌ ಅಜರ್‌ ವಿರುದ್ಧ ಪಾಕಿಸ್ತಾನ ಪ್ರಕರಣವನ್ನೇ ದಾಖಲಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದವು.

‘ಪಾಕಿಸ್ತಾನದ ಈ ವೈಫಲ್ಯದಿಂದಾಗಿ ನೆರೆಯ ಹಾಗೂ ಇತರ ರಾಷ್ಟ್ರಗಳು ಭಯೋತ್ಪಾದಕ ಸಂಘಟನೆಗಳಿಂದ ಸಂಕಷ್ಟ ಎದುರಿಸುವಂತಾಗಿದೆ’ ಎಂದೂ ಈ ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿದವು ಎಂದೂ ಮೂಲಗಳು ತಿಳಿಸಿವೆ.

ಪಾಕಿಸ್ತಾನಕ್ಕೆ ಸಿಗದ ಆರ್ಥಿಕ ನೆರವು

‘ಬೂದು ಪಟ್ಟಿ’ಗೆ ಒಂದು ರಾಷ್ಟ್ರವನ್ನು ಸೇರಿಸುವುದು ಎಂದರೆ ಆ ರಾಷ್ಟ್ರಕ್ಕೆ ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಸಿಗಬಹುದಾದ ಆರ್ಥಿಕ ನೆರವಿಗೆ ಕಡಿವಾಣ ಬಿದ್ದಂತೆ. ಪಾಕಿಸ್ತಾನವನ್ನು ಬೂದು ಪಟ್ಟಿಯಲ್ಲಿ ಮುಂದುವರಿಸುವುದರಿಂದ ಐಎಂಎಫ್‌, ವಿಶ್ವಬ್ಯಾಂಕ್‌, ಏಷ್ಯಾ ಅಭಿವೃದ್ಧಿ ಬ್ಯಾಂಕ್‌ ಹಾಗೂ ಯುರೋಪಿಯನ್‌ ಯೂನಿಯನ್‌ನಿಂದ (ಇಯು) ಸುಲಭವಾಗಿ ಹಣಕಾಸು ನೆರವು ಸಿಗದು. ಮೂಡೀಸ್‌, ಎಸ್‌ಆ್ಯಂಡ್‌ ಪಿ, ಫಿಚ್‌ನಂತಹ ಸಂಸ್ಥೆಗಳಿಂದ ಕಡಿಮೆ ರೇಟಿಂಗ್‌ ಬಂದರೆ ದೇಶದಲ್ಲಿ ಹೂಡಿಕೆ ಮೇಲೂ ಪರಿಣಾಮ ಬೀರುವುದು. ಈಗಾಗಲೇ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನ, ಹಣಕಾಸು ನೆರವಿಗಾಗಿ ಅನೇಕ ರಾಷ್ಟ್ರಗಳ ಮೊರೆ ಹೋಗಿದೆ. ಆದರೆ, ಎಫ್‌ಎಟಿಎಫ್‌ನ ನಿರ್ಧಾರದಿಂದ ಇಲ್ಲಿಯೂ ಪಾಕಿಸ್ತಾನಕ್ಕೆ ತೊಂದರೆ ಎದುರಾಗಲಿದೆ.

ಕ್ರಮ ಅಗತ್ಯ

‘ಎಫ್‌ಎಟಿಎಫ್‌ ನೀಡಿರುವ ಅಂಶಗಳನ್ನು ಸೆಪ್ಟೆಂಬರ್‌ ಒಳಗಾಗಿ ಪೂರ್ಣಪ್ರಮಾಣದಲ್ಲಿ ಅನುಷ್ಠಾನಕ್ಕೆ ತರಬೇಕು. ಪಾಕಿಸ್ತಾನವು ಭಯೋತ್ಪಾದಕ ಸಂಘಟನೆ ವಿರುದ್ಧ ನಂಬಲರ್ಹ, ಪರಿಶೀಲನಾರ್ಹ ಹಾಗೂ ಸಮರ್ಥನೀಯ ಕ್ರಮ ಕೈಗೊಳ್ಳುತ್ತದೆ ಎಂಬುದು ನಮ್ಮ ನಿರೀಕ್ಷೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್‌ ಕುಮಾರ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.