ADVERTISEMENT

ಕಾನೂನು ಶಿಕ್ಷಣದ ಪಿತಾಮಹ ಮಾಧವ ಮೆನನ್‌ ಇನ್ನಿಲ್ಲ

ಪಿಟಿಐ
Published 8 ಮೇ 2019, 17:30 IST
Last Updated 8 ಮೇ 2019, 17:30 IST
ಮಾಧವ ಮೆನನ್‌
ಮಾಧವ ಮೆನನ್‌   

ತಿರುವನಂತಪುರ: ಭಾರತದ ಆಧುನಿಕ ಕಾನೂನು ಶಿಕ್ಷಣದ ಪಿತಾಮಹ ಡಾ. ಎನ್. ಆರ್‌. ಮಾಧವ ಮೆನನ್‌ (84) ಮಂಗಳವಾರ ರಾತ್ರಿ ನಿಧನರಾದರು.

ಅವರಿಗೆ ಪತ್ನಿ ಹಾಗೂ ಪುತ್ರ ಇದ್ದಾರೆ. ವಯೋಸಹಜವಾದ ಅನಾರೋಗ್ಯದಿಂದ ಬಳಲುತ್ತಿದ್ದ ಮೆನನ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೆನನ್‌ ಅವರ ಅಂತ್ಯಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಇಲ್ಲಿನ ಶಾಂತಿ ಕವಾಡಂನಲ್ಲಿ ಬುಧವಾರ ನೆರವೇರಿತು. ನೀಲಕಂಠ ರಾಮಕೃಷ್ಣ ಮಾಧವ ಮೆನನ್‌ ಅವರು ಕಾನೂನು ಶಿಕ್ಷಣ ಕ್ಷೇತ್ರದಲ್ಲಿ ಅದ್ಭುತ ಕ್ರಾಂತಿ ಮಾಡಿದ್ದಾರೆ. ಮೂರು ವರ್ಷಗಳ ಎಲ್‌ಎಲ್‌ಬಿ ಕೋರ್ಸ್‌ ಅನ್ನು ಐದು ವರ್ಷಗಳ ಕೋರ್ಸ್‌ ಆಗಿ ಮಾರ್ಪಡಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು.

ADVERTISEMENT

ಭಾರತೀಯ ವಕೀಲರ ಪರಿಷತ್‌ನ ಆಹ್ವಾನದ ಮೇರೆಗೆ 1986ರಲ್ಲಿ ಬೆಂಗಳೂರಿಗೆ ಬಂದ ಮೆನನ್‌ ಅವರು ಇತರರೊಂದಿಗೆ ಸೇರಿ ಬೆಂಗಳೂರಿನ ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯುನಿವರ್ಸಿಟಿ (ಎನ್‌ಎಲ್‌ಎಸ್‌ಐಯು) ಸ್ಥಾಪಿಸುವುದರ ಜೊತೆಗೆ, 12 ವರ್ಷಗಳ ಕಾಲ ಸಂಸ್ಥಾಪಕ ಕುಲಪತಿಯಾಗಿಯೂ ಸೇವೆ ಸಲ್ಲಿಸಿದ್ದರು. ಪದ್ಮಶ್ರೀ ಪುರಸ್ಕಾರಕ್ಕೂ ಅವರು ಪಾತ್ರರಾಗಿದ್ದರು.

1935ರಲ್ಲಿ ಜನಿಸಿದ್ದ ಮೆನನ್‌ ಅವರು ಕೇರಳ ವಿಶ್ವವಿದ್ಯಾಲಯದಲ್ಲಿ ಬಿ.ಎಸ್‌.ಸಿ. ಮತ್ತು ಬಿ.ಎಲ್‌. ಪದವಿ ಪೂರೈಸಿದ್ದರು. 1956ರಲ್ಲಿ ತಮ್ಮ 21 ನೇ ವಯಸ್ಸಿಗೆ ಅವರು ಕೇರಳ ಹೈಕೋರ್ಟ್‌ನ ವಕೀಲರಾದರು.

ಪಂಜಾಬ್‌ ವಿಶ್ವವಿದ್ಯಾಲಯದಲ್ಲಿ ಎಂ.ಎ ಪೂರೈಸಿದ ಅವರು ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದಿಂದ (ಎಎಂಯು) ಎಲ್‌.ಎಲ್‌.ಎಂ. ಮತ್ತು ಪಿಎಚ್‌.ಡಿ. ಪದವಿ ಪಡೆದುಕೊಂಡಿದ್ದರು. 1960ರಲ್ಲಿ ಇದೇ ವಿಶ್ವವಿದ್ಯಾಲಯದಲ್ಲಿ ಬೋಧಕರಾಗಿ ಸೇರಿಕೊಂಡಿದ್ದರು.

1965ರಲ್ಲಿ ದೆಹಲಿ ವಿಶ್ವ ವಿದ್ಯಾಲಯದ ಪ್ರತಿಷ್ಠಿತ ಕ್ಯಾಂಪಸ್‌ ಲಾ ಸೆಂಟರ್‌ನ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಜ್ಯೋತಿ ಬಸು ಅವರ ಆಹ್ವಾನದ ಮೇರೆಗೆ ಅಲ್ಲಿಗೂ ತೆರಳಿದ್ದ ಮೆನನ್‌ ಅವರು ಪಶ್ಚಿಮ ಬಂಗಾಳ ರಾಷ್ಟ್ರೀಯ ನ್ಯಾಯಾಲಯ ವಿಜ್ಞಾನ ವಿಶ್ವವಿದ್ಯಾಲಯದ ಸ್ಥಾಪನೆಯಲ್ಲೂ ಮಹತ್ವದ ಪಾತ್ರ ವಹಿಸಿದ್ದರು. ಈ ವಿ.ವಿಯಲ್ಲಿ 1998ರಿಂದ 2003ರ ವರೆಗೆ ಕುಲಪತಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.

ಭೋಪಾಲ್‌ನ ನ್ಯಾಷನಲ್‌ ಜ್ಯುಡಿಷಿಯಲ್‌ ಅಕಾಡೆಮಿಯ ಸಂಸ್ಥಾಪಕ ನಿರ್ದೇಶಕರಾಗಿಯೂ ಮೆನನ್‌ ಅವರು ಕಾರ್ಯ ನಿರ್ವಹಿಸಿದ್ದರು. ಕಾನೂನು ಶಿಕ್ಷಣಕ್ಕೆ ಸಂಬಂಧಿಸಿದ ಹಲವಾರು ಕೃತಿಗಳನ್ನೂ ರಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.