ADVERTISEMENT

ಉಜ್ಜಯಿನಿ ಅತ್ಯಾಚಾರ ಪ್ರಕರಣ: ನನ್ನ ಮಗನನ್ನು ನೇಣಿಗೇರಿಸಿ– ಆರೋಪಿ ತಂದೆ ಆಗ್ರಹ

ಪಿಟಿಐ
Published 30 ಸೆಪ್ಟೆಂಬರ್ 2023, 16:35 IST
Last Updated 30 ಸೆಪ್ಟೆಂಬರ್ 2023, 16:35 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಉಜ್ಜಯಿನಿ (ಮಧ್ಯಪ್ರದೇಶ) : ‘12 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿರುವ ನನ್ನ ಮಗನನ್ನು ನೇಣಿಗೇರಿಸುವ ಮೂಲಕ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಆರೋಪಿ ತಂದೆ ಆಗ್ರಹಿಸಿದ್ದಾರೆ.

ಅತ್ಯಾಚಾರ ಕೃತ್ಯಕ್ಕೆ ಸಂಬಂಧಿಸಿದಂತೆ ಪೊಲೀಸರು ಆಟೊ ಚಾಲಕ ಭರತ್ ಸೋನಿಯನ್ನು ಬಂಧಿಸಿದ್ದಾರೆ.

ADVERTISEMENT

‘ಇದೊಂದು, ನಾಚಿಕೆಗೇಡಿನ ಕೃತ್ಯ. ಮಗನ ಭೇಟಿಗೆ ನಾನು ಆಸ್ಪತ್ರೆಗೆ ಹೋಗಿಲ್ಲ. ಪೊಲೀಸ್‌ ಠಾಣೆಗೂ ಹೋಗುವುದಿಲ್ಲ, ಕೋರ್ಟ್‌ಗೂ ಹೋಗುವುದಿಲ್ಲ. ನನ್ನ ಮಗ ಅಪರಾಧ ಮಾಡಿದ್ದಾನೆ. ಆತನನ್ನು ನೇಣಿಗೇರಿಸಬೇಕು’ ಎಂದು ಆರೋಪಿಯ ತಂದೆ ಪ್ರತಿಕ್ರಿಯಿಸಿದ್ದಾರೆ.

ಇನ್ನೊಂದೆಡೆ, ಆರೋಪಿಯ ಪರವಾಗಿ ವಕಾಲತ್ತು ವಹಿಸಬಾರದು ಎಂದು ಸ್ಥಳೀಯ ವಕೀಲರ ಸಂಘವು ವಕೀಲರಿಗೆ ಮನವಿ ಮಾಡಿದೆ. ‘ಈ ಕೃತ್ಯ ದೇಗುಲಗಳ ನಗರವಾದ ಉಜ್ಜಯಿನಿಗೆ ಕಳಂಕ ತಂದಿದೆ’ ಎಂದು ವಕೀಲರ ಸಂಘದ ಅಧ್ಯಕ್ಷ ಅಶೋಕ್‌ ಯಾದವ್‌ ಹೇಳಿದರು.

ಕಳಂಕ ತಂದ ಕೃತ್ಯ (ಇಂದೋರ್‌): ‘ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣವು ಮಧ್ಯಪ್ರದೇಶಕ್ಕೆ ಕಳಂಕ ತಂದಿದೆ. ಇಂಥ ಪ್ರಕರಣಗಳು ನಿತ್ಯವೂ ರಾಜ್ಯದಲ್ಲಿ ನಡೆಯುತ್ತಿವೆ. ಆದರೆ, ಬೆಳಕಿಗೆ ಬರುತ್ತಿಲ್ಲ’ ಎಂದು ಮಧ್ಯ ಪ್ರದೇಶದ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಕಮಲ್‌ನಾಥ್ ಹೇಳಿದ್ದಾರೆ.

ಸಂತ್ರಸ್ತೆ ದಾಖಲಾಗಿರುವ ಇಲ್ಲಿನ ಆಸ್ಪತ್ರೆಗೆ ಭೇಟಿ ನೀಡಿದ್ದ ಅವರು ಬಾಲಕಿಯ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದರು. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

‘ಭ್ರಷ್ಟಾಚಾರ ಹಾಗೂ ಮಹಿಳೆಯರು, ಬುಡಕಟ್ಟು ಜನರ ವಿರುದ್ಧದ ದೌರ್ಜನ್ಯ ಪ್ರಕರಣಗಳಲ್ಲಿ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದೆ’ ಎಂದು ಅವರು ದೂರಿದರು. 

‘ಶಸ್ತ್ರಚಿಕಿತ್ಸೆ ಬಳಿಕ ಬಾಲಕಿ ಆರೋಗ್ಯ ಸ್ಥಿರವಾಗಿದೆ. ಇನ್ನೂ ಮಾನಸಿಕ ಆಘಾತದಿಂದ ಹೊರಬಂದಿಲ್ಲ. ಬಾಲಕಿಗೆ ಉತ್ತಮ ಚಿಕಿತ್ಸೆ ಕೊಡಿಸುವುದು ಸೇರಿದಂತೆ ಆಕೆಯ ಕುಟುಂಬಕ್ಕೆ ಅಗತ್ಯ ನೆರವನ್ನು ಒದಗಿಸಲು ಕಾಂಗ್ರೆಸ್ ಬದ್ಧವಾಗಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.