ಕೆ. ಉನ್ನಿಕೃಷ್ಣನ್
ಚಿತ್ರಕೃಪೆ: @knowyourheroess
ನವದೆಹಲಿ: ‘ಇದು ಭಾರತಕ್ಕೆ ದೊರೆತ ರಾಜತಾಂತ್ರಿಕ ಯಶಸ್ಸು...’ 26/11 ಮುಂಬೈ ದಾಳಿಯ ರೂವಾರಿ ತಹವ್ವುರ್ ರಾಣಾನನ್ನು ಭಾರತಕ್ಕೆ ಕರೆತಂದಿರುವ ಬಗ್ಗೆ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ತಂದೆ ಕೆ. ಉನ್ನಿಕೃಷ್ಣನ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ದಾಳಿಯ ವೇಳೆ ರಾಷ್ಟ್ರೀಯ ಭದ್ರತಾ ಪಡೆ(ಎನ್‌ಎಸ್‌ಜಿ) ಮತ್ತು ಉಗ್ರರೊಂದಿಗೆ ನಡೆದ ಹೋರಾಟದಲ್ಲಿ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರು ಹುತಾತ್ಮರಾಗಿದ್ದರು.
ರಾಣಾ ಅವರನ್ನು ಭಾರತಕ್ಕೆ ಗಡೀಪಾರು ಮಾಡುವಂತೆ ಅಮೆರಿಕ ಸುಪ್ರಿಂ ಕೋರ್ಟ್ ಇತ್ತೀಚೆಗೆ ಆದೇಶಿಸಿತ್ತು. ಇಂದು(ಗುರುವಾರ) ವಿಶೇಷ ವಿಮಾನದ ಮೂಲಕ ರಾಣಾನನ್ನು ಭಾರತಕ್ಕೆ ಕರೆತರಲಾಗಿದೆ.
ಈ ಬಗ್ಗೆ ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿರುವ ಕೆ. ಉನ್ನಿಕೃಷ್ಣನ್ ಅವರು, ‘ಅಮೆರಿಕ ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿದ ನಂತರ ರಾಣಾನನ್ನು ಭಾರತಕ್ಕೆ ಕರೆತರುವ ಬಗ್ಗೆ ಮಾತುಕತೆ ನಡೆದಿತ್ತು. ಹಲವು ವರ್ಷಗಳ ನಂತರ ಭಾರತಕ್ಕೆ ದೊರೆತ ರಾಜತಾಂತ್ರಿಕ ಯಶಸ್ಸು ಇದಾಗಿದೆ. ಇದು ಅಂತಿಮವಲ್ಲ ಅಥವಾ ದೊಡ್ಡ ವಿಷಯವೂ ಅಲ್ಲ. ನಾವು ಸಾಧಿಸಬೇಕಾದದ್ದು ಬಹಳಷ್ಟು ಇವೆ. ಎಲ್ಲ ಸಾಕ್ಷಿಗಳು ನಮ್ಮ ಮುಂದೆ ಇದೆ. ಮುಂದೇನಾಗುತ್ತದೆ ನೋಡೋಣ’ ಎಂದು ಹೇಳಿದ್ದಾರೆ.
‘ನನ್ನ ಮಗ ದಾಳಿಯ ಬಲಿಪಶುವಲ್ಲ, ದಾಳಿಯ ವೇಳೆ ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿ. ಆತ ತನ್ನ ಕರ್ತವ್ಯವನ್ನು ನಿರ್ವಹಿಸಿದ್ದಾನೆ. ಎಲ್ಲೇ ಇದ್ದರೂ ಆತ ತನ್ನ ಕರ್ತವ್ಯವನ್ನು ಬಿಡುತ್ತಿರಲಿಲ್ಲ. ನಿಜವಾದ ಬಲಿಪಶುಗಳು ಅಲ್ಲಿದ್ದ ಜನಗಳು’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.