ADVERTISEMENT

ಸೋಲಿನ ಭೀತಿ; ಬಿಜೆಪಿ ಗೂಂಡಾಗಳಿಂದ ನಮ್ಮ ಅಭ್ಯರ್ಥಿಯ ಅಪಹರಣ: ಎಎಪಿ ಆರೋಪ

ಪಿಟಿಐ
Published 16 ನವೆಂಬರ್ 2022, 10:59 IST
Last Updated 16 ನವೆಂಬರ್ 2022, 10:59 IST
ನವದೆಹಲಿ: ಚುನಾವಣಾ ಆಯೋಗದ ಕಚೇರಿ ಹೊರಗೆ ಪ್ರತಿಭಟನೆ ನಡೆಸಿದ ದೆಹಲಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ | ಪಿಟಿಐ ಚಿತ್ರ
ನವದೆಹಲಿ: ಚುನಾವಣಾ ಆಯೋಗದ ಕಚೇರಿ ಹೊರಗೆ ಪ್ರತಿಭಟನೆ ನಡೆಸಿದ ದೆಹಲಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ | ಪಿಟಿಐ ಚಿತ್ರ   

ನವದೆಹಲಿ: ಬಿಜೆಪಿಯ ಅಣತಿಯಂತೆ ಗುಜರಾತ್‌ನ ಪೂರ್ವ ಸೂರತ್‌ನ ಎಎಪಿ ಅಭ್ಯರ್ಥಿ ಕಾಂಚನ್‌ ಜರಿವಾಲ ಅವರನ್ನು ಅಪಹರಿಸಲಾಗಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಗಂಭೀರ ಆರೋಪ ಮಾಡಿದ್ದಾರೆ. ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಿಜೆಪಿ ಈ ಕೃತ್ಯ ನಡೆಸಿದೆ ಎಂದಿದ್ದಾರೆ.

ಜರಿವಾಲ ಅವರು ಕುಟುಂಬ ಸದಸ್ಯರ ಸಮೇತ ಮಂಗಳವಾರದಿಂದ ಕಾಣೆಯಾಗಿದ್ದಾರೆ. ಅವರು ತಮ್ಮ ನಾಮಪತ್ರ ಪರಿಶೀಲನೆಯ ನಿಟ್ಟಿನಲ್ಲಿ ಸೂರತ್‌ನ ಚುನಾವಣೆ ಆಯೋಗದ ಕಚೇರಿಗೆ ಭೇಟಿ ನೀಡಿದ್ದರು. ಈ ಸಂದರ್ಭ ಜರಿವಾಲ ಅವರ ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ಒತ್ತಡ ಹೇರಲಾಗಿದೆ ಎಂದು ಸಿಸೋಡಿಯಾ ದೂರಿದ್ದಾರೆ.

ಈ ಚುನಾವಣೆಯಲ್ಲಿ ಬಿಜೆಪಿ ಗುಜರಾತ್‌ ಅನ್ನು ಕಳೆದುಕೊಳ್ಳಲಿದೆ. ಹಾಗಾಗಿ ನಮ್ಮ ಪೂರ್ವ ಸೂರತ್‌ನ ಅಭ್ಯರ್ಥಿಯನ್ನು ಅಪಹರಿಸುವಷ್ಟು ಕೀಳುಮಟ್ಟಕ್ಕೆ ಬಿಜೆಪಿ ಇಳಿದಿದೆ. ಸೋಲಿನ ಭಯದಿಂದ ಬಿಜೆಪಿ ಗೂಂಡಾಗಳು ಕಾಂಚನ್‌ ಜರಿವಾಲ ಅವರನ್ನು ಅಪಹರಿಸಿದ್ದಾರೆ ಎಂದು ದೆಹಲಿಯಲ್ಲಿ ಸಿಸೋಡಿಯಾ ಆರೋಪಿಸಿದ್ದಾರೆ.

ADVERTISEMENT

ಇದು ನಮ್ಮ ಅಭ್ಯರ್ಥಿಯ ಅಪಹರಣ ಮಾತ್ರವಲ್ಲ, ಇದು ಪ್ರಜಾಪ್ರಭುತ್ವದ ಅಪಹರಣ. ಗುಜರಾತ್‌ನಲ್ಲಿ ತುಂಬಾ ಅಪಾಯಕರ ಸ್ಥಿತಿ ಇದೆ. ಇದನ್ನು ಚುನಾವಣೆ ಆಯೋಗವು ಗಂಭೀರವಾಗಿ ಪರಿಗಣಿಸಬೇಕು, ನಮ್ಮ ಅಭ್ಯರ್ಥಿ ಮತ್ತು ಅವರ ಕುಟುಂಬ ಸದಸ್ಯರನ್ನು ವಾಪಸ್‌ ಕರೆತರಬೇಕು ಎಂದು ಸಿಸೋಡಿಯಾ ಆಗ್ರಹಿಸಿದ್ದಾರೆ.

ಅಭ್ಯರ್ಥಿ ಕಾಣೆಯಾಗಿ 24 ಗಂಟೆಗಳು ಕಳೆದರೂ ಗುಜರಾತ್‌ನ ಚುನಾವಣಾ ಆಯೋಗದ ಮುಖ್ಯಸ್ಥರು ಯಾವುದೇ ಕ್ರಮ ಕೈಗೊಂಡಿಲ್ಲ. ಪತ್ತೆ ಹಚ್ಚುವ ಅಥವಾ ರಕ್ಷಿಸುವ ಕೆಲಸಕ್ಕೆ ಮುಂದಾಗಿಲ್ಲ. ಇದು ಚುನಾವಣಾ ಆಯೋಗದ ಕಾರ್ಯವೈಖರಿ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ ಎಂದು ಸಿಸೋಡಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.