ನವದೆಹಲಿ: ‘ಜೀವನದಲ್ಲಿ ಸವಾಲುಗಳು ಎದುರಾಗುತ್ತಿರುತ್ತವೆ. ಆ ಸವಾಲುಗಳನ್ನು ಧೈರ್ಯವಾಗಿ ಎದುರಿಸಿದರೆ ನಿಜವಾದ ಗೆಲುವು ನಿಮ್ಮದಾಗುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿಯವರು, ವಾಕ್ ಮತ್ತು ಶ್ರವಣದೋಷವಿರುವ ಯುವತಿಯೊಬ್ಬರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ವಾಕ್ ಮತ್ತು ಶ್ರವಣದೋಷವಿರುವ ಗುಜರಾತ್‌ನ ಸೂರತ್ ನಗರದ 23ರ ಹರೆಯದ ವಂದನಾ, ದೀಪಾವಳಿ ಹಬ್ಬದ ಶುಭಾಶಯಕ್ಕಾಗಿ ರಂಗೋಲಿ ಚಿತ್ರವನ್ನು ಬಿಡಿಸಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ಕಳಿಸಿದ್ದರು. ಆ ಶುಭಾಶಯ ಪತ್ರಕ್ಕೆ ಉತ್ತರಿಸಿದ ಪತ್ರದಲ್ಲಿ ಪ್ರಧಾನಿ ಈ ಮಾತುಗಳನ್ನು ಹೇಳಿದ್ದಾರೆ.
‘ಆ ಪತ್ರಕ್ಕೆ ಪ್ರಧಾನಿಯವರಿಂದ ಪ್ರತಿಕ್ರಿಯೆ ಬಂದ ಮೇಲೆ ಆಕೆ ತುಂಬಾ ಖುಷಿಯಾಗಿದ್ದಾರೆ ಮತ್ತು ಉತ್ತೇಜಿತಗೊಂಡಿದ್ದಾರೆ’ ಎಂದು ವಂದನಾ ಅವರ ಸಹೋದರ ಕಿಶನ್‌ಭಾಯ್ ಪಟೇಲ್ ಹೇಳಿದ್ದಾರೆ.
‘ಸಹೋದರಿಗೆ ಹುಟ್ಟಿದಾಗಿನಿಂದ ಕಿವಿ ಕೇಳುವುದಿಲ್ಲ. ಮಾತು ಬರುವುದಿಲ್ಲ. ಈ ನ್ಯೂನತೆಗಳ ನಡುವೆ ಕೋಚಿಂಗ್ ಸಂಸ್ಥೆಯಲ್ಲಿ ಕಲೆ ಕಲಿಯುತ್ತಿದ್ದಾರೆ’ ಎಂದು ಅವರು ಹೇಳಿದರು.
‘ಪ್ರಧಾನಿಯವರಂತೆ, ಅನೇಕರು ನನ್ನ ತಂಗಿ ಬಿಡಿಸಿದ್ದ ರಂಗೋಲಿಯನ್ನು ಮೆಚ್ಚಿದ್ದರು’ ಎಂದು ಅವರು ಸ್ಮರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.