ADVERTISEMENT

‘ನಾಗ್‌’ ಕ್ಷಿಪಣಿ ಅಂತಿಮ ಪರೀಕ್ಷೆ ಯಶಸ್ವಿ: ಡಿಆರ್‌ಡಿಒ

ಪಿಟಿಐ
Published 22 ಅಕ್ಟೋಬರ್ 2020, 10:54 IST
Last Updated 22 ಅಕ್ಟೋಬರ್ 2020, 10:54 IST
ಟ್ಯಾಂಕ್‌ ನಿರೋಧಕ ಗುರಿ ನಿರ್ದೇಶಿತ ‘ನಾಗ್‌’ ಕ್ಷಿಪಣಿಯ ಅಂತಿಮ ಪರೀಕ್ಷೆ ರಾಜಸ್ಥಾನದ ಪೋಖ್ರಾನ್‌ ಮರುಭೂಮಿಯಲ್ಲಿ ಗುರುವಾರ ಯಶಸ್ವಿಯಾಗಿ ನೆರವೇರಿತು –ಪಿಟಿಐ ಚಿತ್ರ
ಟ್ಯಾಂಕ್‌ ನಿರೋಧಕ ಗುರಿ ನಿರ್ದೇಶಿತ ‘ನಾಗ್‌’ ಕ್ಷಿಪಣಿಯ ಅಂತಿಮ ಪರೀಕ್ಷೆ ರಾಜಸ್ಥಾನದ ಪೋಖ್ರಾನ್‌ ಮರುಭೂಮಿಯಲ್ಲಿ ಗುರುವಾರ ಯಶಸ್ವಿಯಾಗಿ ನೆರವೇರಿತು –ಪಿಟಿಐ ಚಿತ್ರ   

ನವದೆಹಲಿ: ಯುದ್ಧ ಟ್ಯಾಂಕ್‌ಗಳನ್ನು ಹೊಡೆದುರುಳಿಸಬಲ್ಲ, ಮೂರನೇ ತಲೆಮಾರಿನ ಅತ್ಯಾಧುನಿಕ ‘ನಾಗ್‌’ ಕ್ಷಿಪಣಿಯ ಅಂತಿಮ ಪರೀಕ್ಷೆ ಯಶಸ್ವಿಯಾಗಿದೆ ಎಂದು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಗುರುವಾರ ತಿಳಿಸಿದೆ.

‘ಟ್ಯಾಂಕ್‌ ನಿರೋಧಕ– ಗುರಿ ನಿರ್ದೇಶಿತ’ ವೈಶಿಷ್ಟ್ಯದ ಈ ಕ್ಷಿಪಣಿಯ ಪರೀಕ್ಷೆಯನ್ನುರಾಜಸ್ಥಾನದ ಪೋಖ್ರಾನ್‌ ಮರುಭೂಮಿಯಲ್ಲಿ ಬೆಳಿಗ್ಗೆ 6.45ಕ್ಕೆ ನೆರವೇರಿಸಲಾಯಿತು.

ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಈ ಕ್ಷಿಪಣಿ ಭದ್ರತಾ ಪಡೆಗಳ ಬಳಕೆಗೆ ಈಗ ಸನ್ನದ್ಧ. ಹಗಲಷ್ಟೇ ಅಲ್ಲ, ರಾತ್ರಿಯೂ ದಾಳಿ ನಡೆಸಿ ಶತ್ರು ಪಾಳೆಯದ ಯುದ್ಧ ಟ್ಯಾಂಕ್‌ಗಳನ್ನು ಧ್ವಂಸ ಮಾಡಬಲ್ಲದು ಎಂದು ಸಂಸ್ಥೆ ತಿಳಿಸಿದೆ.

ADVERTISEMENT

‘ಟ್ಯಾಂಕ್‌ಗಳನ್ನು ಗುರಿಯಾಗಿಸಿದ ಸಿಡಿತಲೆಗಳನ್ನು ಈ ಕ್ಷಿಪಣಿಗೆ ಅಳವಡಿಸಲಾಗಿತ್ತು. ಈ ಕ್ಷಿಪಣಿಯನ್ನು ಹೊತ್ತ ‘ನಮಿಕಾ’ ವಾಹಕ ತನ್ನ ನೆಲೆಯಿಂದ ಚಿಮ್ಮಿದರೆ, ಕ್ಷಿಪಣಿಯು ನಿಖರವಾಗಿ ಗುರಿಯನ್ನು ತಲುಪಿತು ಎಂದು ತಿಳಿಸಿದೆ.

ರಕ್ಷಣಾ ಇಲಾಖೆಯ ಅಧೀನದ ಸಾರ್ವಜನಿಕ ಸಂಸ್ಥೆ ಭಾರತ್‌ ಡೈನಾಮಿಕ್ಸ್ ಲಿ. (ಬಿಡಿಎಲ್‌) ಈ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದೆ. ಮೇಡಕ್‌ನಲ್ಲಿರುವ ಆರ್ಡನನ್ಸ್‌ ಫ್ಯಾಕ್ಟರಿಯಲ್ಲಿ ‘ನಮಿಕಾ’ ಅಭಿವೃದ್ಧಿಪಡಿಸಲಾಗಿದೆ ಎಂದೂ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

‘ನಾಗ್‌’ ಕ್ಷಿಪಣಿ ಪರೀಕ್ಷೆ ಯಶಸ್ವಿಯಾದದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಡಿಆರ್‌ಡಿಒ ಹಾಗೂ ಸೇನೆಯನ್ನು ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.