ವಾರಾಣಸಿ: ಸಾಮಾಜಿಕ ಜಾಲತಾಣದ ಮೂಲಕ ವದಂತಿ ಹರಡಲಾಗಿದೆ ಎಂಬ ಆರೋಪದಲ್ಲಿ ವಾರಾಣಸಿಯ ಲಂಕಾ ಪೊಲೀಸ್ ಠಾಣೆಯಲ್ಲಿ ಆರು ಮಂದಿ ಪತ್ರಕರ್ತರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
‘ಇಲ್ಲಿನ ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿಎಚ್‌ಯು) ಸಮೀಪದ ಪಂಡಿತ್ ಮದನ್ ಮೋಹನ್ ಮಾಳವೀಯ ಅವರ ಪ್ರತಿಮೆಯನ್ನು ಜೂನ್ 25 ರಾತ್ರಿ ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಸ್ವಚ್ಛಗೊಳಿಸಿದ್ದರು. ಇದರ ವಿಡಿಯೊ ಚಿತ್ರೀಕರಣ ಮಾಡಿದ್ದ ಪತ್ರಕರ್ತರು, ಅದಕ್ಕೆ ಜಾತಿ ಆಧಾರಿತ ವಿವರಣೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಕೋಮು ಭಾವನೆ ಕೆರಳಿಸುವಂತಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಲಂಕಾ ಠಾಣಾಧಿಕಾರಿ ಶಿವಕಾಂತ್ ಮಿಶ್ರಾ ತಿಳಿಸಿದ್ದಾರೆ.
ಖಬರ್ ಬನಾರಸ್‌ನ ಅಡ್ಮಿನ್ ಅಶ್ರದ್, ಅಭಿಷೇಕ್ ಜಾ, ಅಭಿಷೇಕ್ ತ್ರಿಪಾಠಿ, ಸೋನು ಸಿಂಗ್, ಶೈಲೇಜ್ ಮತ್ತು ‘ಎಕ್ಸ್’ ಬಳಕೆದಾರ ನಿತಿನ್ ರಾಜ್ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
‘ಪತ್ರಕರ್ತರ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿ’ ಎಂದು ಕಾಂಗ್ರೆಸ್ ಆರೋಪಿಸಿದೆ. ‘ಮದನ್ ಮೋಹನ್ ಮಾಳವೀಯ ಅವರ ಪತ್ರಿಮೆಯ ಮೇಲೆ ಯಾರೋ ಹತ್ತಿ ಸ್ವಚ್ಛಗೊಳಿಸುತ್ತಿರುವುದನ್ನು ಪ್ರಶ್ನಿಸಿದ ಪತ್ರಕರ್ತರನ್ನು ಬಿಜೆಪಿ ಸರ್ಕಾರ ಅಪರಾಧಿಗಳಂತೆ ಪರಿಗಣಿಸಿದೆ. ಇದು ದುರದೃಷ್ಟಕರ. ಪತ್ರಕರ್ತರಿಗೆ ಅಪಮಾನ ಮಾಡುವುದನ್ನು ನಾವು ಸಹಿಸುವುದಿಲ್ಲ’ ಎಂದು ಉತ್ತರ ಪ್ರದೇಶದ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಜಯ್ ರಾಜ್ ಹೇಳಿದ್ದಾರೆ.
‘ಪತ್ರಕರ್ತರು ಘನತೆ ಕಾಪಾಡಿಕೊಳ್ಳಬೇಕು. ಅವಸರದ, ತಪ್ಪು ವರದಿಗಾರಿಕೆ ಸಲ್ಲ. ಪತ್ರಕರ್ತರೊಂದಿಗೆ ನಾವಿದ್ದೇವೆ’ ಎಂದು ವಿಧಾನ ಪರಿಷತ್‌ನ ಬಿಜೆಪಿ ಸದಸ್ಯ, ಮಾಜಿ ಪತ್ರಕರ್ತ ಧರ್ಮೇಂದ್ರ ಸಿಂಗ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.