ADVERTISEMENT

ನೇಪಾಳ–ಭಾರತ ನಡುವೆ ರೈಲು ಸೇವೆಗೆ ಚಾಲನೆ

ಪಿಟಿಐ
Published 3 ಏಪ್ರಿಲ್ 2022, 18:52 IST
Last Updated 3 ಏಪ್ರಿಲ್ 2022, 18:52 IST
ಭಾರತ ಪ್ರವಾಸ ಕೈಗೊಂಡಿರುವ ನೇಪಾಳ ಪ್ರಧಾನಿ ಶೇರ್ ಬಹಾದ್ದೂರ್ ದೇವುಬಾ ಅವರು ಭಾನುವಾರ ವಾರಾಣಸಿಗೆ ಭೇಟಿ ನೀಡಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಬರಮಾಡಿಕೊಂಡರು –ಪಿಟಿಐ ಚಿತ್ರ
ಭಾರತ ಪ್ರವಾಸ ಕೈಗೊಂಡಿರುವ ನೇಪಾಳ ಪ್ರಧಾನಿ ಶೇರ್ ಬಹಾದ್ದೂರ್ ದೇವುಬಾ ಅವರು ಭಾನುವಾರ ವಾರಾಣಸಿಗೆ ಭೇಟಿ ನೀಡಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಬರಮಾಡಿಕೊಂಡರು –ಪಿಟಿಐ ಚಿತ್ರ   

ನವದೆಹಲಿ: ನೇಪಾಳ ಮತ್ತು ಭಾರತದ ನಡುವಿನ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸುವುದರ ಭಾಗವಾಗಿ ಪ್ರಥಮ ಬ್ರಾಡ್‌ಗೇಜ್‌ ಪ್ಯಾಸೆಂಜರ್ ರೈಲು ಸೇವೆಗೆ ಶನಿವಾರ ಚಾಲನೆ ನೀಡಲಾಯಿತು.

ಬಿಹಾರದ ಜಯನಗರ್‌ ಮತ್ತು ನೇಪಾಳದ ಕುರ್ತಾ ವಲಯದ ನಡುವೆ ಸಂಪರ್ಕ ಕಲ್ಪಿಸುವ ಈ ರೈಲು ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಚಾಲನೆ ನೀಡಿದರು.

ಉಭಯ ಪ್ರಧಾನಿಗಳು ಇದೇ ಸಂದರ್ಭದಲ್ಲಿ ವಾಣಿಜ್ಯ, ಹೂಡಿಕೆ, ಸಂಪರ್ಕ ಕ್ಷೇತ್ರದಲ್ಲಿ ಸಹಕಾರ ಮತ್ತು ಬಾಂಧವ್ಯ ವೃದ್ಧಿ ಕುರಿತು ಚರ್ಚಿಸಿದರು. ಜುಲೈ 2021ರಲ್ಲಿ ಪ್ರಧಾನಿಯಾದ ಬಳಿಕ ಇದು ದೇವುಬಾ ಅವರ ಮೊದಲ ವಿದೇಶ ಭೇಟಿ ಇದಾಗಿದೆ.

ADVERTISEMENT

ಭಾರತ ಸರ್ಕಾರವು ರೈಲು ಸಂಪರ್ಕ ಯೋಜನೆಗಾಗಿ ₹ 548 ಕೋಟಿ ಅನುದಾನ ಒದಗಿಸಿದೆ. ಉಭಯ ಪ್ರಧಾನಿಗಳು ರೈಲ್ವೆ ಕ್ಷೇತ್ರದಲ್ಲಿ ತಾಂತ್ರಿಕ ಸಹಕಾರ ನೀಡುವ ಕುರಿತ ಒಡಂಬಡಿಕೆಗೂ ಇದೇ ಸಂದರ್ಭದಲ್ಲಿ ಸಹಿ ಹಾಕಿದರು.

ಜಯನಗರ –ಕುರ್ತಾ ಸೆಕ್ಷನ್‌ ರೈಲು ಸೇವೆಯು ಜಯನಗರ –ಬಿಜಲ್ಪುರ–ಬರ್ದಿಬಾಸ್‌ ನಡುವಣ ರೈಲು ಸೇವೆಯ ಭಾಗವಾಗಿದೆ. ಇದರ ಅಂತರ 35 ಕಿ.ಮೀ ಆಗಿದ್ದು, ಈ ಪೈಕಿ 3 ಕಿ.ಮೀ. ಬಿಹಾರದ ವ್ಯಾಪ್ತಿಯಲ್ಲಿದೆ.

ಸೀತೆಯ ಜನ್ಮಸ್ಥಳ ಎನ್ನಲಾದ, ಹಿಂದೂಗಳ ಧಾರ್ಮಿಕ ಸ್ಥಳವೂ ಆಗಿರುವ ಜನಕ್‌ಪುರ ಧಾಮ್, ನೇಪಾಳ ಮತ್ತು ಭಾರತ ನಡುವಣ ರೈಲು ಸಂಪರ್ಕದ ಪ್ರಮುಖ ಆಕರ್ಷಣೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.