ADVERTISEMENT

ಜಮ್ಮು ಕಾಶ್ಮೀರ: ಇಂಟರ್‌ನೆಟ್‌ಗಾಗಿ ಪತ್ರಕರ್ತನ ಪರದಾಟ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2019, 20:01 IST
Last Updated 8 ಆಗಸ್ಟ್ 2019, 20:01 IST
   

ಶ್ರೀನಗರ: ಸೋಮವಾರ ಬೆಳಿಗ್ಗೆ (ಆ.5) ನಿದ್ದೆಯಿಂದ ಎದ್ದಾಗ ಶ್ರೀನಗರದ ಹೊರವಲಯದ ನನ್ನ ಮನೆಯ ಹೊರಗಡೆ ಮೌನವಿತ್ತು. ಜಮ್ಮು ಕಾಶ್ಮೀರದ ವಿಶೇಷಾಧಿಕಾರ ರದ್ದುಗೊಳಿಸುವ ಬಗ್ಗೆ ಏನಾದರೂ ಸುದ್ದಿ ಇದೆಯೇ ಎಂದು ಅಪ್ಪ ಕೇಳಿದರು.

ಭಾನುವಾರ ರಾತ್ರಿಯಿಂದಲೇ ಇಂಟರ್ನೆಟ್, ಫೋನ್ ಸೇವೆ ಬಂದ್ ಆಗಿತ್ತು. ಟಿವಿಯಲ್ಲಿ ಏನಾದರೂ ಸುದ್ದಿ ಇದೆಯೇ ಎಂದು ಅವರನ್ನು ಮರುಪ್ರಶ್ನಿಸಿದೆ. ಟಿವಿ ಪ್ರಸಾರ ನಿರ್ಬಂಧಿಸಿ, ರಾತ್ರಿಯಿಂದಲೇ ಕರ್ಫ್ಯೂ ಹಾಕಿದ್ದಾರೆ ಎಂದು ಅವರು ಹೇಳಿದಾಗ ನನಗೆ ಗಾಬರಿಯಾಯಿತು.

ಪತ್ರಕರ್ತನಾಗಿ ಇದೊಂದು ಸವಾಲಿನ ಸಮಯ. ಲ್ಯಾಪ್‌ಟಾಪ್ ಎತ್ತಿಕೊಂಡು, ಮಕ್ಕಳಾದ 5 ವರ್ಷದ ಅಯಾನ್, 2 ವರ್ಷದ ಅಮಾನ್‌ ಅವರನ್ನು ಅಪ್ಪಿಕೊಂಡು, ಮನೆಗೆ ಬರಲು ಒಂದಿಷ್ಟು ದಿನ ಹಿಡಿಯಬಹುದು ಎಂದು ಮಡದಿಗೆ ಹೇಳಿ ಕಾರು ಹತ್ತಿ ಹೊರಟೆ. ಮಾರ್ಗಮಧ್ಯೆ ಭದ್ರತಾ ಪಡೆಗಳು ನನ್ನನ್ನು ತಡೆದವು.

ADVERTISEMENT

‘ನೀವು ಯಾರು, ಇಲ್ಲಿ ಕರ್ಫ್ಯೂ ಇರುವುದು ಗೊತ್ತಿಲ್ಲವೇ’ ಎಂಬ ಪ್ರಶ್ನೆಗಳ ಸುರಿಮಳೆಗೈದರು. ‘ನಾನೊಬ್ಬ ಪತ್ರಕರ್ತ, ನನ್ನ ಕರ್ತವ್ಯ ನಿರ್ವಹಿಸಲು ಬಂದಿದ್ದೇನೆ’ ಎಂದೆ. ಕೆಲವು ನಿಮಿಷಗಳ ಬಳಿಕ ಬೇರೊಂದು ದಾರಿಯಲ್ಲಿ ಹೋಗಲು ಸೂಚಿಸಿದರು. ಅಂತರ್ಜಾಲ ಸಂಪರ್ಕ ಹುಡುಕಲು ಸ್ಥಳೀಯ ಪತ್ರಿಕಾ ಕಚೇರಿಯನ್ನು ಹೊಕ್ಕೆ. ಅಲ್ಲಿದ್ದ ನನ್ನ ಇಬ್ಬರು ಸ್ನೇಹಿತರ ಮುಖ ಕಳೆಗಟ್ಟಿತ್ತು. ಏನಾದರೂ ಅವಘಡ ಆಯಿತೇ ಎಂದೆ. ಕೇವಲ 370ನೇ ವಿಧಿ ಅಸಿಂಧು ಮಾತ್ರವಲ್ಲ, ಜಮ್ಮು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನವೇ ಹೋಯ್ತು ಎಂದರು.

ಈ ಸುದ್ದಿಯನ್ನು ಕಳಿಸದೇ ಏಕೆ ಸುಮ್ಮನಿದ್ದೀರಿ ಎಂದು ಅವರನ್ನು ಪ್ರಶ್ನಿಸಿದೆ. ಕಚೇರಿಗೆ ಮೀಸಲಾಗಿದ್ದ ಇಂಟರ್ನೆಟ್‌ ಸಂಪರ್ಕವೂ ಕಡಿತ
ಗೊಂಡಿದೆ ಎಂದು ಅವರು ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ಕಚೇರಿಯನ್ನು ಸಂಪರ್ಕಿಸಿ ಕರ್ಫ್ಯೂ ಪಾಸ್‌ಗಳನ್ನಾದರೂ ಪಡೆಯಲು ನಿರ್ಧರಿಸಿದೆವು. ಸ್ಥಳೀಯ ವರದಿಗಾರರಿಗೆ ಪಾಸ್ ನೀಡದಂತೆ ನಿರ್ದೇಶನವಿದೆ ಎಂದು ಅಲ್ಲಿನ ಅಧಿಕಾರಿ ತಿಳಿಸಿದರು.

ಡಿಸಿ ಕಚೇರಿಯಿಂದ ಸಚಿವಾಲಯ ಕಚೇರಿಗೆ ಹೋಗಲು ಮುಂದಾದೆವು. ಬಿಗಿ ಬಂದೋಬಸ್ತ್‌ ದಾಟಿಕೊಂಡು ಕಚೇರಿ ಮುಂಭಾಗಕ್ಕೆ ಬಂದಾಗ, ಒಳಗೆ ಯಾರೂ ಇಲ್ಲ ಎಂದು ಪೊಲೀಸರು ತಿಳಿಸಿದರು. ಕಾಶ್ಮೀರದ ಸುದ್ದಿಯನ್ನು ತಿಳಿದುಕೊಳ್ಳುವ ಕುತೂಹಲ ಅವರ ಮುಖದಲ್ಲಿತ್ತು. ಕಾಶ್ಮೀರದ ವಿಶೇಷಾ
ಧಿಕಾರ ತೆಗೆದುಹಾಕಲಾಗಿದೆ ಎಂಬು
ದನ್ನು ತಿಳಿದು ಪೊಲೀಸರು ಅಚ್ಚರಿ
ಗೊಂಡರು. ಕಾಶ್ಮೀರವನ್ನು ಪ್ಯಾಲೆಸ್ಟೀನ್‌ ಜತೆ ಹೋಲಿಸತೊಡಗಿದರು.

‘ಸರ್, ಪ್ಯಾಲೆಸ್ಟೀನ್‌ನ ಸ್ಥಿತಿಯನ್ನು ಮುಂದಿನ ದಿನಗಳಲ್ಲಿ ನಾವೂ ಎದುರಿಸಲಿದ್ದೇವೆ. ಕಾಶ್ಮೀರಿ ನಾಗರಿಕರ ರೀತಿ ನಾವೂ ಅಸಹಾಯಕರು’ ಎಂದು ಭಾವುಕರಾದ ಅವರ ಕಣ್ಣಾಲಿಗಳಿಂದ ಜಾರಿದ ನೀರು ಕೆನ್ನೆ ಮೇಲಿಂದ ಇಳಿಯಿತು. ಭದ್ರತಾ ವಿಭಾಗದ ಎಸ್‌ಪಿ ಕಚೇರಿ ನಮ್ಮ ಮುಂದಿನ ಗುರಿಯಾಗಿತ್ತು. ಅವರು ಮಾಧ್ಯಮಸ್ನೇಹಿ ಅಧಿಕಾರಿ ಎಂದು ಹೆಸರಾಗಿದ್ದ ಕಾರಣ ನಮಗೆ ಹೆಚ್ಚಿನ ಭರವಸೆ ಇತ್ತು. ಆದರೆ, ಆ ನಿರೀಕ್ಷೆಯೂ ಹುಸಿಯಾಯಿತು.

ಹಲವು ಹತ್ತು ಬ್ಯಾರಿಕೇಡ್‌ಗಳು ಮತ್ತು ಇತರ ಅಡ್ಡಿಗಳನ್ನು ದಾಟಿ ರಾತ್ರಿ 11.30ರ ಹೊತ್ತಿಗೆ ಮನೆಗೆ ಮರಳಿದೆ. ನನ್ನ ಪುಟ್ಟ ಮಕ್ಕಳು ಅಪ್ಪನಿಗಾಗಿ ಕಾಯುತ್ತಿದ್ದರು. 370ನೇ ವಿಧಿ ರದ್ದಾಗಿದೆ ಎಂಬ ಸುದ್ದಿಯನ್ನು ತಿಳಿಸಿದಾಗ ಎಲ್ಲ ಕಾಶ್ಮೀರಿಗಳಂತೆ ನನ್ನ ಹೆಂಡತಿಯದ್ದೂ ಅದೇ ಪ್ರಶ್ನೆಯಾ
ಗಿತ್ತು: ‘ಕಾಶ್ಮೀರದ ಸ್ಥಿತಿ ಉತ್ತಮಗೊಳ್ಳುತ್ತಿರುವಾಗ ಭಾರತ ಯಾಕೆ ಇಂತಹ ಕ್ರಮ ಕೈಗೊಂಡಿದೆ?’ ನನ್ನಲ್ಲಿ ಅದಕ್ಕೆ ಉತ್ತರವೇನೂ ಇರಲಿಲ್ಲ. ಮಂಗಳವಾರ ಮತ್ತು ಬುಧವಾರ ಭಿನ್ನವೇನೂ ಆಗಿರಲಿಲ್ಲ. ಸಂಸತ್ತಿನಲ್ಲಿ ನಡೆದದ್ದರ ಆಘಾತದಿಂದ ಕಾಶ್ಮೀರ ಇನ್ನೂ ಚೇತರಿಸಿಕೊಂಡಿಲ್ಲ. ಭಾರತವು ತಮ್ಮ ನಂಬಿಕೆಗೆ ದ್ರೋಹ ಬಗೆದಿದೆ ಮತ್ತು ತಮಗೆ ಹೋಗಲು ಎಲ್ಲೂ ಜಾಗವೇ ಇಲ್ಲ ಎಂಬ ಭಾವನೆ ಜನರಲ್ಲಿ ಇದೆ. ಈಗಿನ ಸ್ಥಿತಿಯ ನಂತರ ಕಾಶ್ಮೀರವು ಎತ್ತ ಸಾಗಬಹುದು ಎಂಬುದನ್ನು ಕಾಲವೇ ಹೇಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.