ADVERTISEMENT

ದೋಣಿ ಮೇಲೆ ಗುಂಡು ಹಾರಿಸಿದ ಪ್ರಕರಣ: ಪಾಕ್‌ನ 10 ಮಂದಿ ವಿರುದ್ಧ ಎಫ್‌ಐಆರ್‌

ಪಿಟಿಐ
Published 8 ನವೆಂಬರ್ 2021, 6:39 IST
Last Updated 8 ನವೆಂಬರ್ 2021, 6:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪೋರಬಂದರ್ (ಪಿಟಿಐ): ಗುಜರಾತ್‌ನ ಕರಾವಳಿಯಲ್ಲಿ ಭಾರತೀಯ ಮೀನುಗಾರರಿದ್ದ ದೋಣಿಯ ಮೇಲೆ ಗುಂಡು ಹಾರಿಸಿದ್ದ ಪ್ರಕರಣ ಸಂಬಂಧ ಪಾಕ್‌ನ ನೌಕಾನೆಲೆಯ 10 ಮಂದಿ ಭದ್ರತಾ ಸಿಬ್ಬಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಇಲ್ಲಿನ ನವಿಬಂದರ್‌ ಠಾಣೆಯಲ್ಲಿ ಐಪಿಸಿ ಕಾಯ್ದೆಯನ್ವಯ ಕೊಲೆ, ಕೊಲೆ ಯತ್ನ, ಶಸ್ತ್ರಾಸ್ತ್ರ ಕಾಯ್ದೆಯಡಿ ಪಾಕ್‌ನ 10 ಮಂದಿ ಅಪರಿಚಿತರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಸಂಜೆ 4 ಗಂಟೆಗೆ ಕೃತ್ಯ ನಡೆದಿತ್ತು. ಭಾರತೀಯರಿದ್ದ ದೋಣಿಯ ಜಲ್‌ಪರಿ ಮೇಲೆ ಪಾಕ್‌ನ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದು, ಮೀನುಗಾರ, ಮಹಾರಾಷ್ಟ್ರದ ಶ್ರೀಧರ್‌ ರಮೇಶ್‌ ಚಮ್ರೆ (32) ಮೃತಪಟ್ಟಿದ್ದರೆ, ಡಿಯುವಿನ ದಿಲೀಪ್‌ ಸೋಳಂಕಿ ಎಂಬುವರು ಗಾಯಗೊಂಡಿದ್ದರು. ದೋಣಿಯಲ್ಲಿ ಒಟ್ಟು ಏಳು ಮಂದಿ ಇದ್ದರು.

ADVERTISEMENT

ಭಾರತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಅಪ್ರಚೋದಿತವಾಗಿ ಏಕಾಏಕಿ ಗುಂಡು ಹಾರಿಸಲಾಗಿದೆ. ಪಾಕ್ ಜೊತೆ ರಾಜತಾಂತ್ರಿಕ ಮಾರ್ಗದಲ್ಲೂ ಈ ವಿಷಯವನ್ನು ಚರ್ಚಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಕೃತ್ಯ ಖಂಡಿಸಿ ಗ್ರಾಮದಲ್ಲಿ ಬಂದ್‌

ಪಾಲ್ಗಾರ್ (ಪಿಟಿಐ): ಪಾಕಿಸ್ತಾನದ ನೌಕಾನೆಲೆ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ್ದರಿಂದ ಮೀನುಗಾರ ಮೃತಪಟ್ಟಿದ್ದ ಘಟನೆ ಖಂಡಿಸಿ ಇಲ್ಲಿನ ವದ್ರಾಯಿ ಗ್ರಾಮದ ಜನರು ಸೋಮವಾರ ಬಂದ್ ಆಚರಿಸಿದರು.

ಗುಜರಾತ್‌ ಕರಾವಳಿಯಲ್ಲಿ ಶನಿವಾರ ಕೃತ್ಯ ನಡೆದಿದ್ದು, ಮೀನುಗಾರ ಶ್ರೀಧರ್ ರಮೇಶ್ ಚಮ್ರೆ ಇದೇ ಗ್ರಾಮದವರು. ಸ್ಥಳೀಯ ಪಂಚಾಯತ್‌ ಬಂದ್‌ಗೆ ಕರೆ ನೀಡಿದ್ದು ಅಂಗಡಿ, ವಹಿವಾಟು ಬಂದ್ ಆಗಿತ್ತು.

ಚಮ್ರೆ ಅವರಿಗೆ ತಂದೆ,ತಾಯಿ, ಪತ್ನಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಗ್ರಾಮದಲ್ಲಿ ಪರಿಸ್ಥಿತಿ ಸದ್ಯ ಶಾಂತಿಯುತವಾಗಿದೆ ಎಂದು ಸತ್ಪತಿ ಪೊಲೀಸ್‌ ಠಾಣೆಯ ಅಧಿಕಾರಿ ಸುಧೀರ್ ದಹೇರ‍್ಕರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.