ADVERTISEMENT

ನಿರ್ಮಾಣ ಹಂತದ ಗೋದಾಮಿನ ಗೋಡೆ ಕುಸಿತ: 5 ಸಾವು, 9 ಮಂದಿಗೆ ಗಾಯ

ಪಿಟಿಐ
Published 16 ಜುಲೈ 2022, 4:33 IST
Last Updated 16 ಜುಲೈ 2022, 4:33 IST
   

ನವದೆಹಲಿ: ನಿರ್ಮಾಣ ಹಂತದ ಗೋದಾಮಿನ ಗೋಡೆ ಕುಸಿದ ಪರಿಣಾಮ ಐವರು ಮೃತಪಟ್ಟು, 9 ಮಂದಿ ಗಾಯಗೊಂಡಿರುವ ಘಟನೆ ದೆಹಲಿ ಹೊರವಲಯದ ಅಲಿಪುರ್ ಪ್ರದೇಶದಲ್ಲಿ ನಡೆದಿದೆ.

ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ.

5,000 ಚದರ ಮೀಟರ್‌ಗಳಷ್ಟು ಅಗಲವಾದ ಈ ಗೋದಾಮಿಗೆ ರಕ್ಷಣಾ ಕಾರ್ಯಾಚರಣೆಗೆ 4 ಅಗ್ನಿಶಾಮಕ ವಾಹನಗಳನ್ನು ಕಳುಹಿಸಲಾಗಿದೆ ಎಂದು ದೆಹಲಿ ಅಗ್ನಿಶಾಮಕ ದಳದ ಸಿರ್ದೇಶಕ ಅತುಲ್ ಗಾರ್ಗ್ ತಿಳಿಸಿದ್ದಾರೆ.

ADVERTISEMENT

ಗೋದಾಮು ಅಕ್ರಮವಾಗಿ ನಿರ್ಮಾಣವಾಗುತ್ತಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ಶುಕ್ರವಾರ ಮಧ್ಯಾಹ್ನ 12.40ರ ಸುಮಾರಿಗೆ ಅಲಿಪುರ್ ಪೊಲೀಸ್ ಠಾಣೆಗೆ ಗೋಡೆ ಕುಸಿದಿರುವ ಬಗ್ಗೆ ಕರೆ ಮಾಡಿ ಮಾಹಿತಿ ನೀಡಲಾಗಿದೆ.

‘ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ, ಸುಮಾರು 100 ಅಡಿ ಉದ್ದ ಮತ್ತು 15 ಅಡಿ ಎತ್ತರದ ಗೋದಾಮಿನ ಗೋಡೆ ಕುಸಿದಿರುವುದು ಬೆಳಕಿಗೆ ಬಂದಿದೆ. ಪಕ್ಕದಲ್ಲಿ ಪಾಯ ತೋಡುತ್ತಿದ್ದ 20 ಕಾರ್ಮಿಕರ ಮೇಲೆ ಗೋಡೆ ಕುಸಿದಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

‘ಸಾಮೂಹಿಕ ಪ್ರಯತ್ನದ ಫಲವಾಗಿ 13 ಕಾರ್ಮಿಕರನ್ನು ನರೇಲಾದ ಸತ್ಯವಾದಿ ರಾಜ ಹರಿಶ್ಚಂದ್ರ ಆಸ್ಪತ್ರೆಗೆ ದಾಖಲಿಸುವಲ್ಲಿ ಸಫಲವಾದೆವು. ಆದರೆ, ಅದರಲ್ಲಿ 5 ಮಂದಿಯ ಪ್ರಾಣ ಪಕ್ಷಿ ಅದಾಗಲೇ ಹಾರಿಹೋಗಿತ್ತು’ ಎಂದು ಅವರು ತಿಳಿಸಿದ್ಧಾರೆ.

ಭೂಮಿ ಮಾಲೀಕನನ್ನು ಅಲಿಪುರ್ ಪ್ರದೇಶದ ಬಕೊಲಿಯ ಶಕ್ತಿ ಸಿಂಗ್(40) ಎಂದು ಗುರುತಿಸಲಾಗಿದೆ. ಗುತ್ತಿಗೆದಾರ ಸಿಕಂದರ್ ಎಂದು ಪೊಲೀಸರು ಪತ್ತೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.