ADVERTISEMENT

ಮಹಿಳೆಯರ ಮದುವೆ ವಯಸ್ಸು ಹೆಚ್ಚಳ: 'ವೈಯಕ್ತಿಕ ಸ್ವಾತಂತ್ರ್ಯದ ಹಸ್ತಕ್ಷೇಪ'

ಪಿಟಿಐ
Published 21 ಡಿಸೆಂಬರ್ 2021, 14:44 IST
Last Updated 21 ಡಿಸೆಂಬರ್ 2021, 14:44 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಖನೌ: ಮದುವೆಯ ವಯಸ್ಸನ್ನು ನಿಗದಿಪಡಿಸದಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು (ಎಐಎಂಪಿಎಲ್‌ಬಿ) ಈ ನಡೆಯನ್ನು ವೈಯಕ್ತಿಕ ಸ್ವಾತಂತ್ರ್ಯದಲ್ಲಿನ ಹಸ್ತಕ್ಷೇಪ ಎಂದು ಕರೆದಿದೆ.

‘ಈ ರೀತಿಯ ಉಪಯೋಗವಿಲ್ಲದ ಮತ್ತು ಹಾನಿಕಾರಕ ಕಾನೂನು ರಚನೆಗಳಿಂದ ಸರ್ಕಾರ ದೂರವಿರಬೇಕು’ ಎಂದು ಮಂಡಳಿ ಹೇಳಿದೆ.

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು ಈಗಿನ 18 ವರ್ಷದಿಂದ 21 ವರ್ಷಕ್ಕೆ ಏರಿಸುವುದಕ್ಕೆ ಸಂಬಂಧಿಸಿದಂತೆ ಕಾಯ್ದೆ ರೂಪಿಸಲು ಕೇಂದ್ರ ಸಚಿವ ಸಂಪುಟ ಕಳೆದ ವಾರ ಒಪ್ಪಿಗೆ ನೀಡಿತ್ತು.

ADVERTISEMENT

‘ಮನುಷ್ಯನ ಜೀವನದಲ್ಲಿ ಮದುವೆ ಎಂಬುದು ಅತಿ ಅವಶ್ಯಕ ಭಾಗವಾಗಿದೆ. ಇ‌ದಕ್ಕೆ ಸರಿಯಾದ ವಯಸ್ಸನ್ನು ನಿಗದಿಮಾಡಲು ಸಾಧ್ಯವಿಲ್ಲ. ಇದು ನೈತಿಕ ಮೌಲ್ಯಗಳ ಸಂರಕ್ಷಣೆಗೆ ಸಂಬಂಧಿಸಿದ ವಿಷಯವಾಗಿದೆ. ಹಾಗಾಗಿ ಇಸ್ಲಾಂ ಸೇರಿದಂತೆ ಬಹುತೇಕ ಧರ್ಮಗಳಲ್ಲಿ ಮದುವೆಗೆ ನಿರ್ದಿಷ್ಟ ವಯಸ್ಸನ್ನು ನಿಗದಿಪಡಿಸಿಲ್ಲ ’ ಎಂದು ಮಂಡಳಿಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಖಲೀದ್‌ ಸೈಫುಲ್ಹಾ ರಹಮಾನಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಈ ನಿರ್ಧಾರ ಪೋಷಕರ ವಿವೇಚನೆಗೆ ಬಿಟ್ಟಿದ್ದು. ಒಂದು ವೇಳೆ ಪೋಷಕರಿಗೆ ಮಗಳು 21 ವರ್ಷಕ್ಕಿಂತ ಮೊದಲೇ ಮದುವೆಗೆ ಯೋಗ್ಯಳಾಗಿದ್ದಾಳೆ ಎಂದಾದರೆ, ಅವರು ತಮ್ಮ ಅವಳಿಗೆ ಮದುವೆ ಮಾಡಬಹುದು. ಮದುವೆಯ ಬಳಿಕವೂ ಆಕೆ ತನ್ನ ಜವಾಬ್ದಾರಿಗಳನ್ನು ನಿಭಾಯಿಸಬಹುದು. ಮಹಿಳೆಯನ್ನು ಮದುವೆಯಾಗದಂತೆ ತೆಡೆಯುವುದು ಕ್ರೂರ ನಡೆಯಾಗಿದೆ. ಅಲ್ಲದೇ, ವೈಯಕ್ತಿಕ ಸ್ವಾತಂತ್ರ್ಯದಲ್ಲಿನ ಹಸ್ತಕ್ಷೇಪವೂ ಹೌದು. ಇದರಿಂದ ಸಮಾಜದಲ್ಲಿ ಅಪರಾಧಗಳು ಹೆಚ್ಚುವ ಸಾಧ್ಯತೆಗಳೂ ಇವೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ‌

‘ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ 21ಕ್ಕೆ ಏರಿಸುವುದರಿಂದ ಆಕೆಗಾಗಲೀ, ಸಮಾಜಕ್ಕಾಗಲೀ ಯಾವುದೇ ಲಾಭವಿಲ್ಲ. ಇದರಿಂದ ಕೇವಲ ಸಮಾಜದ ನೈತಿಕ ಮೌಲ್ಯಗಳಿಗೆ ಗಂಭೀರ ಧಕ್ಕೆ ಉಂಟಾಗಬಹುದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.