
ಶ್ರೀನಗರ: ಕಾಶ್ಮೀರದಲ್ಲಿ ಹಿಮಪಾತದಿಂದಾಗಿ ಮಂಗಳವಾರ ಶ್ರೀನಗರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ ಮತ್ತು ಅಲ್ಲಿಂದ ಹೊರಡಬೇಕಿದ್ದ ಸುಮಾರು 50 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಪ್ರತಿಕೂಲ ಹವಾಮಾನ ಮತ್ತು ಶ್ರೀನಗರ ವಿಮಾನ ನಿಲ್ದಾಣದಲ್ಲಿ ನಿರಂತರ ಹಿಮಪಾತದ ಹಿನ್ನೆಲೆಯಲ್ಲಿ, ವಿಮಾನಯಾನ ಸಂಸ್ಥೆಗಳು ಇಂದು ಹಾರಾಟ ನಡೆಸಬೇಕಿದ್ದ ವಿಮಾನಗಳನ್ನು ರದ್ದುಗೊಳಿಸಿವೆ’ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಿಮಪಾತದಿಂದಾಗಿ ಇಲ್ಲಿಯವರೆಗೆ ಸುಮಾರು 50 ವಿಮಾನಗಳು(25 ಒಳ ಬರುವ ಮತ್ತು 25 ಹೊರಹೋಗುವ) ರದ್ದಾಗಿವೆ ಎಂದು ವರದಿ ತಿಳಿಸಿದೆ.
ಶ್ರೀನಗರ ವಿಮಾನ ನಿಲ್ದಾಣಕ್ಕೆ ನಿಗದಿಕ್ಕಿಂತ ಇನ್ನೂ ನಾಲ್ಕು ಹೆಚ್ಚುವರಿ ವಿಮಾನಗಳು ಆಗಮಿಸಲು ವೇಳಾಪಟ್ಟಿ ಇತ್ತು. ಆದರೆ, ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಅವು ಕಾರ್ಯನಿರ್ವಹಿಸುವ ಸಾಧ್ಯತೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನಗಳ ಹಾರಾಟ ಕುರಿತ ಅಪ್ಡೇಟ್, ಪರ್ಯಾಯ ವ್ಯವಸ್ಥೆಗಳ ಕುರಿತ ಮಾಹಿತಿಗಾಗಿ ವಿಮಾನಯಾನ ಸಂಸ್ಥೆಗಳ ಜೊತೆ ಸಂಪರ್ಕದಲ್ಲಿರುವಂತೆ ಪ್ರಯಾಣಿಕರಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನಗಳ ರದ್ದತಿಯಿಂದಾಗಿ, ವಾರಾಂತ್ಯ ಮತ್ತು ಗಣರಾಜ್ಯೋತ್ಸವದ ರಜೆಯನ್ನು ಕಣಿವೆಯಲ್ಲಿ ಕಳೆದು ಮನೆಗೆ ಮರಳಬೇಕಿದ್ದ ನೂರಾರು ಪ್ರವಾಸಿಗರು ಶ್ರೀನಗರದಲ್ಲೇ ಸಿಲುಕಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.