ADVERTISEMENT

ಪ್ರವಾಹ –ಭೂಕುಸಿತ: ಮೃತರ ಸಂಖ್ಯೆ 22ಕ್ಕೆ ಏರಿಕೆ

ಪಿಟಿಐ
Published 17 ಅಕ್ಟೋಬರ್ 2021, 19:49 IST
Last Updated 17 ಅಕ್ಟೋಬರ್ 2021, 19:49 IST
ಇಡುಕ್ಕಿ ಜಿಲ್ಲೆಯ ಕೊಕ್ಕಯಾರ್‌ನಲ್ಲಿ ಭೂಕುಸಿತದಿಂದ ಕೆಸರಿನಲ್ಲಿ ಹೂತು ಹೋಗಿದ್ದ ವಾಹನವನ್ನು ಭಾನುವಾರ ಹೊರತೆಗೆಯಲಾಯಿತು –ಎಎಫ್‌ಪಿ ಚಿತ್ರ
ಇಡುಕ್ಕಿ ಜಿಲ್ಲೆಯ ಕೊಕ್ಕಯಾರ್‌ನಲ್ಲಿ ಭೂಕುಸಿತದಿಂದ ಕೆಸರಿನಲ್ಲಿ ಹೂತು ಹೋಗಿದ್ದ ವಾಹನವನ್ನು ಭಾನುವಾರ ಹೊರತೆಗೆಯಲಾಯಿತು –ಎಎಫ್‌ಪಿ ಚಿತ್ರ   

ಕೋಟಯಂ/ಇಡುಕ್ಕಿ: ಕೇರಳದಲ್ಲಿ ಶನಿವಾರ ಸುರಿದ ಭಾರಿ ಮಳೆ, ಪ್ರವಾಹ ಹಾಗೂ ಭೂಕುಸಿತದಿಂದಾಗಿ ಮೃತಪಟ್ಟವರ ಸಂಖ್ಯೆ ಭಾನುವಾರ 22ಕ್ಕೆ ಏರಿದೆ.ಹಲವು ಜನರು ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ.

ಇಡುಕ್ಕಿ ಹಾಗೂ ಕೋಟಯಂ ಜಿಲ್ಲೆಗಳ ವಿವಿಧೆಡೆ ಭೂಕುಸಿತವಾಗಿದ್ದು, ಅವಶೇಷಗಳ ಅಡಿ ಸಿಲುಕಿದ್ದ 22 ಜನರ ಮೃತದೇಹಗಳನ್ನು ರಕ್ಷಣಾ ಸಿಬ್ಬಂದಿ ಹೊರತೆಗೆದಿದ್ದಾರೆ. ಈ ಪೈಕಿ, 13 ಮಂದಿ ಕೋಟಯಂ ಜಿಲ್ಲೆಯ ಕೂಟ್ಟಿಕಲ್‌ಗೆ ಸೇರಿದವರಾಗಿದ್ದಾರೆ ಎಂದು ರಾಜ್ಯ ಕಂದಾಯ ಸಚಿವ ಕೆ. ರಾಜನ್ ತಿಳಿಸಿದ್ದಾರೆ.

ಕೂಟ್ಟಿಕಲ್‌ನಲ್ಲಿ ಮನೆಯೊಂದು ಕೊಚ್ಚಿಹೋಗಿದ್ದು, ಮೂವರು ಬಾಲಕಿಯರು ಸೇರಿದಂತೆ ಒಂದೇ ಕುಟುಂಬದ ಆರು ಜನರು ಮೃತಪಟ್ಟಿದ್ದಾರೆ. ಆ ಪೈಕಿ ಮೂವರ ಮೃತದೇಹಗಳು ಶನಿವಾರ ಸಿಕ್ಕಿದ್ದರೆ, ಉಳಿದವರ ಮೃತದೇಹಗಳು ಭಾನುವಾರ ಪತ್ತೆಯಾಗಿವೆ. ಇಡುಕ್ಕಿ ಜಿಲ್ಲೆಯ ಕೊಕ್ಕಯಾರ್‌
ನಲ್ಲಿ, ಕೆಸರಿನಲ್ಲಿ ಹುದುಗಿ ಹೋಗಿದ್ದ ಮೂರು ಮಕ್ಕಳ ಮೃತದೇಹಗಳು ಪರಸ್ಪರ ಕೈ ಹಿಡಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿವೆ. ಕಾಣೆಯಾದ ಐವರಿಗೆ ಹುಡುಕಾಟ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಅರಬ್ಬೀ ಸಮುದ್ರದಲ್ಲಿನ ವಾಯುಭಾರ ಕುಸಿತದಿಂದಾಗಿ ಕೇರಳದಲ್ಲಿ ಶನಿವಾರ ಭಾರಿ ಮಳೆಯಾಗಿತ್ತು. ಅ.20ರಂದು ಮತ್ತೆ ಭಾರಿ ಮಳೆಯಾಗಲಿದ್ದು, ಮೂರ್ನಾಲ್ಕು ದಿನಗಳವರೆಗೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ರಾಜ್ಯ ಸರ್ಕಾರವು, ಮೃತರ ಕುಟುಂಬದವರಿಗೆ ₹4 ಲಕ್ಷ ಪರಿಹಾರ ಘೋಷಿಸಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.