ADVERTISEMENT

Flood | ಪ.ಬಂಗಾಳಕ್ಕೆ ಕೇಂದ್ರದ ನೆರವು ಸಿಕ್ಕಿಲ್ಲ: BJP ವಿರುದ್ಧ CM ಮಮತಾ ಗರಂ

ಪಿಟಿಐ
Published 29 ಸೆಪ್ಟೆಂಬರ್ 2024, 13:44 IST
Last Updated 29 ಸೆಪ್ಟೆಂಬರ್ 2024, 13:44 IST
ಸಿಎಂ ಮಮತಾ ಬ್ಯಾನರ್ಜಿ
ಸಿಎಂ ಮಮತಾ ಬ್ಯಾನರ್ಜಿ   

ಕೋಲ್ಕತ್ತ: ಭಾರಿ ಮಳೆಯಿಂದಾಗಿ ಬಂಗಾಳದ ಉತ್ತರ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಆತಂಕಕಾರಿಯಾಗಿದೆ. ಪ್ರಕೃತಿ ವಿಕೋಪವನ್ನು ಎದುರಿಸಲು ರಾಜ್ಯಕ್ಕೆ ಕೇಂದ್ರ ಸರ್ಕಾರ ನೆರವು ನೀಡುತ್ತಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂರಿದ್ದಾರೆ.

ಪ್ರವಾಹ ಪರಿಸ್ಥಿತಿಯ ಸಮೀಕ್ಷೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ‘ಉತ್ತರ ಬಂಗಾಳವು ಪ್ರವಾಹದಿಂದ ತತ್ತರಿಸುತ್ತಿದೆ. ಕೂಚ್ ಬೆಹಾರ್, ಜಲ್‌ಪೈಗುರಿ ಮತ್ತು ಅಲಿಪುರ್ದೌರ್ ಜಿಲ್ಲೆಗಳು ಹಾನಿಗೊಳಗಾಗಿವೆ. ಭೀಕರ ಮಳೆಯಿಂದಾಗಿ ಕೋಶಿ ನದಿ ಪಾತ್ರದಲ್ಲಿನ ಪ್ರದೇಶಗಳು ಮುಂದಿನ ದಿನಗಳಲ್ಲಿ ಹಾನಿಗೊಳಗಾಗುವ ಸಾಧ್ಯತೆಯಿದೆ’ ಎಂದು ತಿಳಿಸಿದರು.

‘ವಿಪತ್ತುಗಳ ನಿರ್ವಹಣೆಗಾಗಿ ರಾಜ್ಯಕ್ಕೆ ಸಹಾಯ ಮಾಡುವಲ್ಲಿ ಕೇಂದ್ರ ಸರ್ಕಾರ ತನ್ನ ಪಾತ್ರವನ್ನು ನಿರ್ವಹಿಸುತ್ತಿಲ್ಲ. ಚುನಾವಣೆ ಸಮಯದಲ್ಲಿ ಮಾತ್ರ ಬಿಜೆಪಿ ನಾಯಕರು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡುತ್ತಾರೆ. ಆದರೆ, ಸಂಕಷ್ಟದ ಸಂದರ್ಭದಲ್ಲಿ ರಾಜ್ಯವನ್ನು ಮರೆತುಬಿಡುತ್ತಾರೆ. ಪಶ್ಚಿಮ ಬಂಗಾಳ ಮಾತ್ರ ಪ್ರವಾಹ ಪರಿಹಾರದಿಂದ ವಂಚಿತವಾಗಿರುತ್ತದೆ’ ಎಂದು ಅವರು ಆರೋಪಿಸಿದ್ದಾರೆ.

ADVERTISEMENT

ನದಿಗಳ ಬಳಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಮಮತಾ ಹೇಳಿದ್ದಾರೆ.

ಬಿಹಾರ: ಪ್ರವಾಹ ಭೀತಿ
ಪಟ್ನಾ: ಬಿಹಾರದ ಉತ್ತರ ದಕ್ಷಿಣ ಮತ್ತು ಮಧ್ಯ ಭಾಗಗಳಲ್ಲಿ ಪ್ರವಾಹ ಸಂಭವಿಸುವ ಸಾಧ್ಯತೆ ಇದೆ ಎಂದು ಅಲ್ಲಿನ ಸರ್ಕಾರ ಭಾನುವಾರ ಎಚ್ಚರಿಕೆ ನೀಡಿದೆ. ಬಿರ್‌ಪುರ ಮತ್ತು ವಾಲ್ಮೀಕಿನಗರ ಜಲಾಶಯಗಳಿಂದ ಭಾನುವಾರ ಹೆಚ್ಚು ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗಿದ್ದು ಇದರಿಂದ 13 ಜಿಲ್ಲೆಗಳ 16.28 ಲಕ್ಷ ಜನರಿಗೆ ಹಾನಿಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ ಸಂಜೆ ಐದು ಗಂಟೆಯವರೆಗೆ 6.61 ಲಕ್ಷ ಕ್ಯುಸೆಕ್‌ ನೀರನ್ನು ಬಿರ್ಪುರ ಜಲಾಶಯದಿಂದ ಕೋಶಿ ನದಿಗೆ ಹರಿಸಲಾಗಿದ್ದು ಇಷ್ಟು ‍ಪ್ರಮಾಣದ ನೀರನ್ನು ಕೋಶಿ ನದಿಗೆ ಹರಿಸಿದ್ದು 56 ವರ್ಷಗಳಲ್ಲಿ ಇದೇ ಮೊದಲು. ವಾಲ್ಮೀಕಿನಗರ ಜಲಾಶಯದಿಂದಲೂ 5.62 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಮೂರು ದಿನಗಳಿಂದ ಸುರಿಯುತ್ತಿರುವ ಭೀಕರ ಮಳೆಯಿಂದಾಗಿ ಪಶ್ಚಿಮಬಂಗಾಳದ ಹಲವಾರು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.