ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಭಾರಿ ಮಳೆಯಿಂದಾಗಿ ಶುಕ್ರವಾರ ಸಂಪೂರ್ಣ ಜಲಾವೃತಗೊಂಡಿರುವ ರಸ್ತೆಯಲ್ಲಿ ದ್ವಿಚಕ್ರ ವಾಹನವನ್ನು ತಳ್ಳಿಕೊಂಡು ಸಾಗುತ್ತಿದ್ದ ಸವಾರ
– ಪಿಟಿಐ ಚಿತ್ರ
ಲಖನೌ: ಉತ್ತರ ಪ್ರದೇಶದಲ್ಲಿ ಹಲವು ದಿನಗಳ ಕಾಲ ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮವಾಗಿ ಅನೇಕ ನದಿಗಳ ನೀರಿನ ಮಟ್ಟವು ಹೆಚ್ಚಾಗಿದ್ದು, ರಾಜ್ಯದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ.
ಅದರಲ್ಲೂ ರಾಜ್ಯದ ಪೂರ್ವ ಮತ್ತು ಕೇಂದ್ರ ಭಾಗಗಳಲ್ಲಿ ಪರಿಸ್ಥಿತಿ ತುಸು ಹೆಚ್ಚೇ ಹದಗೆಟ್ಟಿದೆ. ಇದರಿಂದಾಗಿ 900ಕ್ಕೂ ಹೆಚ್ಚು ಹಳ್ಳಿಗಳ 18 ಲಕ್ಷ ಜನರು ಪ್ರವಾಹದಿಂದ ಬಾಧಿತರಾಗಿದ್ದಾರೆ.
ನೇಪಾಳದ ಗಡಿ ಭಾಗದಲ್ಲಿರುವ ಜಿಲ್ಲೆಗಳಲ್ಲಿ ಪರಿಸ್ಥಿತಿ ಭೀಕರವಾಗಿದ್ದು, ಹೆಚ್ಚಿನ ಭೂಪ್ರದೇಶವು ಜಲಾವೃತಗೊಂಡಿದೆ. ಗ್ರಾಮಗಳಿಗೆ ನೀರು ನುಗ್ಗುತ್ತಿರುವುದರಿಂದ ಜನರು ಸುರಕ್ಷಿತ ಸ್ಥಳಗಳನ್ನು ಅರಸಿ ಹೋಗುತ್ತಿದ್ದಾರೆ ಎಂದು ವರದಿಗಳು ಹೇಳಿವೆ.
ಲಖೀಂಪುರ ಖೇರಿ ಜಿಲ್ಲೆಯಲ್ಲಿ ಸಾಕಷ್ಟು ಕೃಷಿ ಭೂಮಿ ಜಲಾವೃತಗೊಂಡಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಲ್ಲಿಯಾ ಮತ್ತು ಮಊ ಜಿಲ್ಲೆಗಳಲ್ಲಿ ಸರಯೂ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಗೋರಖ್‌ಪುರದಲ್ಲಿ ಸರಯೂ, ರಾಪ್ತಿ ಹಾಗೂ ಆಮಿ ನದಿಗಳ ನೀರಿನ ಮಟ್ಟ ಹೆಚ್ಚಾಗುತ್ತಿದೆ.
ಆಜಂಗಢ, ಮಊ, ಬಲ್ಲಿಯಾ, ಪಿಲಿಭಿತ್, ಶಹಜಹಾನ್‌ಪುರ, ಕುಶಿನಗರ, ಶ್ರಾವಸ್ತಿ, ಬಲರಾಮ್‌ಪುರ, ಲಖೀಂಪುರ ಖೇರಿ, ಬಾರಾಬಂಕಿ, ಸೀತಾಪುರ, ಗೊಂಡಾ, ಸಿದ್ಧಾರ್ಥ್ ನಗರ, ಮೊರಾದಾಬಾದ್, ಬರೈಲಿ ಮತ್ತು ಬಸ್ತಿ ಸೇರಿದಂತೆ ರಾಜ್ಯದ 18 ಜಿಲ್ಲೆಗಳು ಪ್ರವಾಹದಿಂದ ಬಾಧಿತವಾಗಿವೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗುರುವಾರ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದು, ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವನ್ನೂ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿದೆ. ಅಲ್ಲದೇ ಜನರ ರಕ್ಷಣೆಗಾಗಿ 750ಕ್ಕೂ ಹೆಚ್ಚು ದೋಣಿಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಹಜಹಾನ್‌ಪುರದಲ್ಲಿ ಜಲಾವೃತ ಪ್ರದೇಶದಿಂದ ನಿವಾಸಿಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವ ಕಾರ್ಯಾಚರಣೆ ನಡೆಸುತ್ತಿದ ಸೇನಾ ಸಿಬ್ಬಂದಿ
ಉಕ್ಕಿದ ನದಿಗಳು: ಹಲವೆಡೆ ರಸ್ತೆ ರೈಲು ಸಂಚಾರ ಸ್ಥಗಿತ
ಪ್ರವಾಹದ ನೀರು ರಸ್ತೆಗಳ ಮೇಲೆ ಹರಿಯುತ್ತಿರುವದರಿಂದ ಪಿಲಿಭಿತ್ ಜಿಲ್ಲೆಗಳಲ್ಲೂ ಅನೇಕ ರಸ್ತೆಗಳಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ರೈಲು ಹಳಿಗಳು ಜಲಾವೃತಗೊಂಡಿರುವ ಕಾರಣ ಲಖೀಂಪುರ ಖೇರಿ– ಮೈಲಾನಿ ಮಾರ್ಗದಲ್ಲಿ ರೈಲು ಸಂಚಾರವನ್ನು ಬಂದ್ ಮಾಡಲಾಗಿದೆ. ಉಕ್ಕಿ ಹರಿಯುತ್ತಿರುವ ಗರ್ರಾ ನದಿ ನೀರು ಹಾರ್ದೋಯಿ ಜಿಲ್ಲೆಯ ಅನೇಕ ಹಳ್ಳಿಗಳಿಗೂ ನುಗ್ಗಿದೆ. ಶಹಜಹಾನ್‌ಪುರ ಜಿಲ್ಲೆಯಲ್ಲಿ ಗರ್ರಾ ನದಿಯ ನೀರು ಸೇತುವೆಯ ಮೇಲೆ ಉಕ್ಕಿ ಹರಿಯುತ್ತಿದ್ದರಿಂದ ಲಖನೌ–ದೆಹಲಿಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಂಜೆ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಶಹಜಹಾನ್‌ಪುರ ಪಟ್ಟಣದ ಅನೇಕ ನಗರಗಳಿಗೂ ನದಿ ನೀರು ನುಗ್ಗಿದ್ದು ಜಿಲ್ಲಾಡಳಿತವು ಶನಿವಾರದವರೆಗೆ ಶಾಲೆಗಳನ್ನು ಬಂದ್ ಮಾಡಿ ಆದೇಶ ಹೊರಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.