ADVERTISEMENT

ಅಸ್ಸಾಂ ಪ್ರವಾಹ: ಸಂತ್ರಸ್ತರು 1 ಲಕ್ಷ ಜನ

​ಪ್ರಜಾವಾಣಿ ವಾರ್ತೆ
Published 17 ಜುಲೈ 2023, 17:15 IST
Last Updated 17 ಜುಲೈ 2023, 17:15 IST
ಅಸ್ಸಾಂ ರಾಜ್ಯದ ಮೊರಿಗಾಂವ್‌ ಜಿಲ್ಲೆಯ ಮುರ್ಕಾಟ ಗ್ರಾಮದಲ್ಲಿ ಧಾರಾಕಾರ ಮಳೆಯಿಂದಾಗಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ದೋಣಿಯ ಮೂಲಕ ಜನರು ಸುರಕ್ಷಿತ ತಾಣಗಳಿಗೆ ತೆರಳುತ್ತಿರುವುದು –ಎಎಫ್‌ಪಿ ಚಿತ್ರ
ಅಸ್ಸಾಂ ರಾಜ್ಯದ ಮೊರಿಗಾಂವ್‌ ಜಿಲ್ಲೆಯ ಮುರ್ಕಾಟ ಗ್ರಾಮದಲ್ಲಿ ಧಾರಾಕಾರ ಮಳೆಯಿಂದಾಗಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ದೋಣಿಯ ಮೂಲಕ ಜನರು ಸುರಕ್ಷಿತ ತಾಣಗಳಿಗೆ ತೆರಳುತ್ತಿರುವುದು –ಎಎಫ್‌ಪಿ ಚಿತ್ರ   

ಗುವಾಹಟಿ: ನಿರಂತರ ಮಳೆಯಿಂದಾಗಿ ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಮತ್ತಷ್ಟು ಜಟಿಲವಾಗಿದೆ 10 ಜಿಲ್ಲೆಗಳ ಒಂದು ಲಕ್ಷ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.  

ರಾಜ್ಯದ 371 ಹಳ್ಳಿಗಳಲ್ಲಿ ಸದ್ಯ ನೆರೆ ಪರಿಸ್ಥಿತಿ ಎದುರಾಗಿದ್ದು, 3,618.35 ಪ್ರದೇಶದ ಬೆಳೆ ಹಾನಿಯಾಗಿದೆ. ಕೆಲವೆಡೆ ಭಾರಿ ಪ್ರಮಾಣದ ‌ಭೂಸವಕಳಿ ಉಂಟಾಗಿದೆ ಎಂದು  ಅಸ್ಸಾಂ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ತಿಳಿಸಿದೆ.  

‌ದುಬ್ರಿ, ತೇಜ್‌ಪುರ ಮತ್ತು ನೀಮತಿಘಾಟ್‌ನಲ್ಲಿ ಬ್ರಹ್ಮಪುತ್ರ ನದಿ ಪ್ರವಾಹಮಟ್ಟ ಮೀರಿ ಹರಿಯುತ್ತಿದೆ. ಶಿವಸಾಗರದಲ್ಲಿ ಬ್ರಹ್ಮಪುತ್ರ ಉಪನದಿ ದಿಖೋವ್‌ ಉಕ್ಕಿಹರಿಯುತ್ತಿದೆ. 

ADVERTISEMENT

ಉತ್ತರಾಖಂಡದಲ್ಲಿ ನಿರಂತರ ಭೂಕುಸಿತ (ಡೆಹ್ರಾಡೂನ್‌): ಉತ್ತರಾಖಂಡದಲ್ಲಿ ಮಳೆಯಿಂದಾಗಿ ಭಾರಿ ಪ್ರಮಾಣದ ಹಾನಿಯುಂಟಾಗಿದೆ. ನಿರಂತರ ಭೂಕುಸಿತದಿಂದಾಗಿ ಹಲವು ಕಡೆಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಹರಿದ್ವಾರದಲ್ಲಿ ಮಳೆ ಕಾರಣದ ಅವಘಡಗಳಿಂದಾಗಿ ಐದು ಮಂದಿ ಮೃತಪಟ್ಟಿದ್ದಾರೆ. ಏಳು ಮನೆಗಳು ನಾಶಗೊಂಡಿದ್ದು, 201 ಮನೆಗಳು ಭಾಗಶಃ ಹಾನಿಗೀಡಾಗಿವೆ. 17 ರಸ್ತೆಗಳ ಸಂಪರ್ಕ ಕಡಿತಗೊಂಡಿದ್ದು, 9 ಸೇತುವೆಗಳಿಗೆ ಹಾನಿಯುಂಟಾಗಿದೆ.  

ಅಲ್ಕಾನಂದ ನದಿಗೆ ಜಲಾಶಯದಿಂದ ಭಾರಿ ಪ್ರಮಾಣದ ನೀರು ಬಿಡುಗಡೆ ಮಾಡಿರುವುದರಿಂದ ದೇವಪ್ರಯಾಗ, ಹರಿದ್ವಾರಗಳಲ್ಲಿ ಗಂಗಾನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. 463.20 ಮೀ. ಮಟ್ಟದಲ್ಲಿ ಗಂಗೆ ಹರಿಯುತ್ತಿರುವುದರಿಂದ 71 ಜಿಲ್ಲೆಗಳಲ್ಲಿ ನೆರೆ ಪರಿಸ್ಥಿತಿ ಎದುರಾಗಿದೆ.   

ಅಪಾಯವಿಲ್ಲ’: ದೆಹಲಿಯಲ್ಲಿ ಯಮುನಾ ನದಿ ನೀರಿನ ಮಟ್ಟ ಸೋಮವಾರ ಮತ್ತೆ ಏರಿದೆ. ನದಿಯ ಅಪಾಯದ ಮಟ್ಟ 205.33 ಮೀ. ಆಗಿದ್ದು, ಸದ್ಯ 205.58 ಮೀಟರ್‌ನಲ್ಲಿ ಹರಿಯುತ್ತಿದೆ. ನೀರಿನ ಮಟ್ಟ ಏರಿಕೆಯಾದರೂ, ದೆಹಲಿಗೆ ಯಾವುದೇ ಪ್ರವಾಹ ಭೀತಿ ಇಲ್ಲ ಎಂದು ಸಚಿವೆ ಆತಿಶಿ ತಿಳಿಸಿದ್ದಾರೆ.  

ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ನೆರವಿನೊಂದಿಗೆ ಪೊಲೀಸರು ರಾಜ್ಯದಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.