ADVERTISEMENT

ಮೋದಿ ಸರ್ಕಾರದಿಂದ ಸಾಮಾನ್ಯ ಹೂಡಿಕೆದಾರ ಅವಸಾನದ ಅಂಚಿಗೆ: ರಾಹುಲ್‌ ಗಾಂಧಿ ಟೀಕೆ

ಪಿಟಿಐ
Published 7 ಜುಲೈ 2025, 14:12 IST
Last Updated 7 ಜುಲೈ 2025, 14:12 IST
<div class="paragraphs"><p>ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಾಗೂ&nbsp;ಪ್ರಧಾನಿ ನರೇಂದ್ರ ಮೋದಿ</p></div>

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಾಗೂ ಪ್ರಧಾನಿ ನರೇಂದ್ರ ಮೋದಿ

   

ಪಿಟಿಐ ಚಿತ್ರಗಳು

ನವದೆಹಲಿ: ‘ಫ್ಯೂಚರ್ಸ್ ಮತ್ತು ಆಪ್ಷನ್‌’ (ಎಫ್‌ ಅಂಡ್‌ ಒ–ವಾಯಿದಾ ವಹಿವಾಟು) ವಹಿವಾಟಿನಲ್ಲಿ ದೊಡ್ಡ ವ್ಯಕ್ತಿಗಳು ನಡೆಸುತ್ತಿರುವ ಅಕ್ರಮಗಳ ಬಗ್ಗೆ ಮೌನವಹಿಸುವ ಮೂಲಕ ಮೋದಿ ಸರ್ಕಾರವು ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರಾಗಲು ಬಿಟ್ಟು, ಸಾಮಾನ್ಯ ಹೂಡಿಕೆದಾರರನ್ನು ಅವಸಾನದ ಅಂಚಿಗೆ ಕೊಂಡೊಯ್ಯುತ್ತಿದೆ’ ಎಂದು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. 

ADVERTISEMENT

ಅಮೆರಿಕ ಮೂಲದ ಟ್ರೇಡಿಂಗ್‌ ಸಂಸ್ಥೆ ಜೇನ್‌ ಸ್ಟ್ರೀಟ್‌ ಸಮೂಹವನ್ನು ಸೆಬಿ ನಿಷೇಧಿಸಿರುವ ಬೆನ್ನಲ್ಲೇ ರಾಹುಲ್‌ ಅವರು ಕೇಂದ್ರದ ವಿರುದ್ಧ ಈ ವಾಗ್ದಾಳಿ ನಡೆಸಿದ್ದಾರೆ.

‘ಎಕ್ಸ್‌’ನಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಿರುವ ಅವರು, ‘ಎಫ್‌ ಅಂಡ್‌ ಒ ವಹಿವಾಟು ದೊಡ್ಡ ವ್ಯಕ್ತಿಗಳ ಜೇಬು ತುಂಬಿಸುವ ಸ್ವರೂ‍ಪದ್ದಾಗಿ ಬದಲಾಗಿದ್ದು, ಸಣ್ಣ ಹೂಡಿಕೆದಾರರಿಗೆ ಹಾನಿಯಾಗುತ್ತಿದೆ ಎಂದು 2024ರಲ್ಲೇ ನಾನು ಸ್ಪಷ್ಟವಾಗಿ ಹೇಳಿದ್ದೆ. ಇದೀಗ ಸ್ವತಃ ಸೆಬಿಯೇ ಜೇನ್‌ ಸ್ಟ್ರೀಟ್‌ ಸಮೂಹವು ಸಾವಿರಾರು ಕೋಟಿ ವಂಚಿಸಿದೆ ಎಂಬುದನ್ನು ಒಪ್ಪಿಕೊಂಡಿದೆ. ಇಷ್ಟು ದೀರ್ಘ ಕಾಲದವರೆಗೆ ಸೆಬಿ ಏಕೆ ಮೌನ ವಹಿಸಿತ್ತು’ ಎಂದು ಪ್ರಶ್ನಿಸಿದ್ದಾರೆ. 

ಅಲ್ಲದೇ, ‘ಇಷ್ಟೆಲ್ಲಾ ಅಕ್ರಮ ನಡೆಯುತ್ತಿದ್ದರೂ ಯಾರ ಆಜ್ಞೆಯ ಮೇರೆಗೆ ಮೋದಿ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ? ಇನ್ನೂ ಎಷ್ಟು ಮಂದಿ ದೊಡ್ಡ ವ್ಯಕ್ತಿಗಳು ಸಣ್ಣ ಹೂಡಿಕೆದಾರರನ್ನು ಲೂಟಿ ಹೊಡೆಯುತ್ತಿದ್ದಾರೆ? ಇಂಥ ಪ್ರತಿ ಪ್ರಕರಣದಲ್ಲೂ ಮೋದಿ ಸರ್ಕಾರ ಶ್ರೀಮಂತರ ಪರವಿರುವುದು ಸ್ಪಷ್ಟವಾಗುತ್ತಿದೆ’ ಎಂದೂ ರಾಹುಲ್‌ ದೂರಿದ್ದಾರೆ. 

2024ರ ಸೆಪ್ಟೆಂಬರ್‌ 24ರಂದೂ ‘ಎಫ್‌ ಅಂಡ್‌ ಒ’ ವಿಚಾರದ ಕುರಿತು ರಾಹುಲ್‌ ಆಕ್ಷೇಪಿಸಿದ್ದರು. ಅನಿಯಂತ್ರಿತ ‘ಎಫ್‌ ಅಂಡ್‌ ಒ’ ವಹಿವಾಟು ಕಳೆದ ಐದು ವರ್ಷಗಳಲ್ಲಿ 45 ಪಟ್ಟು ಹೆಚ್ಚಾಗಿದೆ. ಕಳೆದ ಮೂರು ವರ್ಷಗಳಲ್ಲಿ ಶೇ 90ರಷ್ಟು ಸಣ್ಣ ಹೂಡಿಕೆದಾರರು ₹1.8 ಲಕ್ಷ ಕೋಟಿಗೂ ಅಧಿಕ ನಷ್ಟವನ್ನು ಅನುಭವಿಸಿದ್ದಾರೆ ಎಂದು ದೂರಿದ್ದರು.

ಅಲ್ಲದೇ, ಸಣ್ಣ ಹೂಡಿಕೆದಾರರಿಗೆ ಹಾನಿ ಉಂಟು ಮಾಡಿ, ಲಾಭ ಗಳಿಸುತ್ತಿರುವ ‘ದೊಡ್ಡ ವ್ಯಕ್ತಿಗಳ’ ಹೆಸರುಗಳನ್ನು ಸೆಬಿ ಬಹಿರಂಗ ಪಡಿಸಬೇಕು ಎಂದೂ ಆಗ್ರಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.