ಹೈದರಾಬಾದ್: ಛತ್ತೀಸಗಢದ ಬಸ್ತಾರ್ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಸಿಪಿಐ (ಮಾವೋವಾದಿ) ಪಕ್ಷದ ಪ್ರಧಾನ ಕಾರ್ಯದರ್ಶಿ ನಂಬಾಲಾ ಕೇಶವ್ ರಾವ್ ಅಲಿಯಾಸ್ ಬಸವರಾಜು (70) ಮೃತಪಟ್ಟ ಬಳಿಕ, ಅವರ ಉತ್ತರಾಧಿಕಾರಿ ಯಾರಾಗುತ್ತಾರೆ ಎಂಬುದನ್ನು ಭದ್ರತಾ ಪಡೆಗಳು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಕೇಶವ್ ರಾವ್ ಅವರ ಹತ್ಯೆಯು ನಕ್ಸಲ್ ಚಳವಳಿಗೆ ಆದ ದೊಡ್ಡ ಹಿನ್ನಡೆ ಎಂದೂ ಮತ್ತು ದೇಶದಲ್ಲಿ ನಕ್ಸಲ್ ಚಟುವಟಿಕೆಯನ್ನು ನಿರ್ಮೂಲನೆ ಮಾಡಲು ಕೇಂದ್ರ ಸರ್ಕಾರ 2024ರ ಜನವರಿಯಿಂದ ಕೈಗೊಂಡಿರುವ ‘ಆಪರೇಷನ್ ಕಾಗರ್’ಗೆ ದೊರೆತ ಅತಿ ದೊಡ್ಡ ಯಶಸ್ಸು ಎಂದೂ ವಿಶ್ಲೇಷಿಸಲಾಗುತ್ತಿದೆ.
ದಶಕಗಳಿಂದ ನಡೆಯುತ್ತಿರುವ ಸಶಸ್ತ್ರ ಸಂಘರ್ಷದಲ್ಲಿ ಮಾವೋವಾದಿಗಳು ಮೊದಲ ಬಾರಿಗೆ ನಾಯಕನಿಲ್ಲದ ಪರಿಸ್ಥಿತಿಗೆ ತಲುಪಿದ್ದಾರೆ. ಅಲ್ಲದೆ, ಭದ್ರತಾ ಪಡೆಗಳೂ ಇದೇ ಮೊದಲ ಬಾರಿಗೆ ನಕ್ಸಲರ ಉನ್ನತ ಶ್ರೇಣಿಯ ನಾಯಕನನ್ನು ಹತ್ಯೆಮಾಡಿವೆ ಎಂದು ಮೂಲಗಳು ತಿಳಿಸಿವೆ.
ಮುಂಚೂಣಿಯಲ್ಲಿ ಇಬ್ಬರ ಹೆಸರು:
ಕೇಶವ ರಾವ್ ನಂತರ ಆ ಸ್ಥಾನಕ್ಕೆ ಇಬ್ಬರ ಹೆಸರು ಮುಂಚೂಣಿಯಲ್ಲಿದೆ ಎಂದು ಗುಪ್ತಚರದ ಉನ್ನತ ಮೂಲಗಳು ತಿಳಿಸಿವೆ. ಅದರ ಪ್ರಕಾರ, ತಿಪ್ಪಿರಿ ತಿರುಪತಿ (60) ಮತ್ತು ಮಲ್ಲೊಜುಲ ವೇಣುಗೋಪಾಲ್ ರಾವ್ (70) ಹೆಸರುಗಳು ಕೇಳಿ ಬರುತ್ತಿವೆ.
ತಿಪ್ಪಿರಿ ತಿರುಪತಿ ಅವರು ಮಾವೋವಾದಿ ಪಕ್ಷದ ಸಶಸ್ತ್ರ ವಿಭಾಗದ ಕೇಂದ್ರ ಮಿಲಿಟರಿ ಆಯೋಗದ (ಸಿಎಂಸಿ) ಮುಖ್ಯಸ್ಥರಾಗಿದ್ದರೆ, ವೇಣುಗೋಪಾಲ್ ರಾವ್ ಅವರು ಸದ್ಯ ಪಕ್ಷದ ಸೈದ್ಧಾಂತಿಕ ಮುಖ್ಯಸ್ಥರಾಗಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಈ ಇಬ್ಬರೂ ತೆಲುಗು ಭಾಷಿಕರಾಗಿದ್ದಾರೆ. ತಿರುಪತಿ ಅಲಿಯಾಸ್ ದೇವುಜಿ ಅವರು ದಲಿತ ಸಮುದಾಯದವರಾಗಿದ್ದು, ತೆಲಂಗಾಣದ ಜಗ್ತಿಯಾಲ್ ಮೂಲದವರು. ವೇಣುಗೋಪಾಲ್ ಅಲಿಯಾಸ್ ಸೋನು ಅವರು ಪೆದ್ದಪಲ್ಲಿ ಪ್ರದೇಶದವರು. ಇಬ್ಬರೂ ಅವಿಭಜಿತ ಆಂಧ್ರ ಪ್ರದೇಶದವರು.
‘ಮಾವೋವಾದಿಗಳಿಗೆ ಬುಧವಾರದ ಎನ್‌ಕೌಂಟರ್‌ನಿಂದ ದೊಡ್ಡ ಆಘಾತ ಮತ್ತು ಹಿನ್ನಡೆಯಾಗಿದೆ. ಅವರು ಪುನಃ ಒಗ್ಗೂಡಲು ಸಮಯ ಬೇಕಾಗಬಹುದು. ಇಂಥ ಸಂದರ್ಭದಲ್ಲಿ ಅವರು ಶೀಘ್ರದಲ್ಲಿಯೇ ಹೊಸ ಕಮಾಂಡರ್ ಅನ್ನು ಘೋಷಿಸುವ ಸಾಧ್ಯತೆ ಕಡಿಮೆ. ಒಂದು ವೇಳೆ ಅವರು ಕಮಾಂಡರ್ ಹೆಸರನ್ನು ಸದ್ಯದಲ್ಲಿಯೇ ಘೋಷಿಸಿದರೆ, ಅವರು ಇನ್ನೂ ಬಲಿಷ್ಠರಾಗಿದ್ದಾರೆ ಎಂಬ ಸಂದೇಶ ರವಾನೆ ಆಗುತ್ತದೆ’ ಎಂದು ಭದ್ರತಾ ಪಡೆಗಳ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.