ಏಕ್ತಾನಗರ್, ಗುಜರಾತ್: ‘ದೇಶವನ್ನು ಅಸ್ಥಿರಗೊಳಿಸಲು ಹಾಗೂ ಜಾಗತಿಕ ದೃಷ್ಟಿಯಿಂದ ನಕಾರಾತ್ಮಕವಾಗಿ ಬಿಂಬಿಸಲು ದೇಶದ ಕೆಲ ಆಂತರಿಕ ಹಾಗೂ ಬಾಹ್ಯ ಶಕ್ತಿಗಳು ಯತ್ನಿಸುತ್ತಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಇಲ್ಲಿ ಆರೋಪಿಸಿದರು.
ಯಾರ ಹೆಸರೂ ಉಲ್ಲೇಖಿಸದ ಪ್ರಧಾನಿ, ‘ಈ ಜನರು’ ಜಾತಿ ಆಧಾರದಲ್ಲಿ ದೇಶ ವಿಭಜಿಸಲು ಈಗ ಯತ್ನಿಸುತ್ತಿದ್ದಾರೆ. ಅವರ ಏಕೈಕ ಗುರಿ ಎಂದರೆ ಸಮಾಜವನ್ನು ದುರ್ಬಲಗೊಳಿಸುವುದು ಹಾಗೂ ಜನರ ಏಕತೆಗೆ ಧಕ್ಕೆ ಉಂಟುಮಾಡುವುದೇ ಆಗಿದೆ ಎಂದು ವಾಗ್ದಾಳಿ ನಡೆಸಿದರು.
ಇಲ್ಲಿ, ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಬೃಹತ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಅ. 31 ಸರ್ದಾರ್ ವಲ್ಲಭಬಾಯಿ ಪಟೇಲರ ಜನ್ಮದಿನವಾಗಿದ್ದು, 2014ರಿಂದಲೂ ಈ ದಿನವನ್ನು ‘ರಾಷ್ಟ್ರೀಯ ಏಕತಾ ದಿನ’ವಾಗಿ ಆಚರಿಸಲಾಗುತ್ತಿದೆ.
‘ಅರಣ್ಯ ಪ್ರದೇಶಗಳಲ್ಲಿ ಈಗ ನಕ್ಸಲರ ಕೃತ್ಯ ಅಂತ್ಯವಾಗುತ್ತಿದೆ. 10 ವರ್ಷಗಳ ನಿರಂತರ ಯತ್ನದ ಪರಿಣಾಮ ನಕ್ಸಲ್ ಪಿಡುಗು ಕೊನೆಗಾಣುತ್ತಿದೆ. ಆದರೆ, ನಗರ ನಕ್ಸಲರ ರೂಪದಲ್ಲಿ ಹೊಸದಾಗಿ ತಲೆಎತ್ತುತ್ತಿದೆ. ದೇಶ ವಿಭಜನೆಯ ಕನಸು ಕಾಣುತ್ತಿರುವ ‘ನಗರ ನಕ್ಸಲ’ರ ವ್ಯವಸ್ಥಿತವಾದ ಸಂಪರ್ಕ ಜಾಲವನ್ನು ಜನರೇ ಗುರುತಿಸಿ, ಅವರ ವಿರುದ್ಧ ಹೋರಾಡಬೇಕು ಹಾಗೂ ಅವರ ಮುಖವಾಡಗಳನ್ನು ಕಳಚಬೇಕು‘ ಎಂದು ಕರೆ ನೀಡಿದರು.
‘ಕೆಲವು ಆಂತರಿಕ ಮತ್ತು ಬಾಹ್ಯ ಶಕ್ತಿಗಳು ದೇಶವನ್ನು ಅಸ್ಥಿರಗೊಳಿಸಲು ಹಾಗೂ ಅರಾಜಕತೆ ಮೂಡಿಸಲು ಯತ್ನಿಸುತ್ತಿವೆ. ದೇಶದ ಆರ್ಥಿಕ ಹಿತಾಸಕ್ತಿಗೆ ಧಕ್ಕೆ ಉಂಟುಮಾಡುವುದೇ ಇಂತಹ ಶಕ್ತಿಗಳ ಉದ್ದೇಶ. ಈ ಮೂಲಕ ವಿದೇಶಿ ಹೂಡಿಕೆದಾರರಿಗೆ ತಪ್ಪು ಸಂದೇಶ ರವಾನಿಸಲೂ ಯತ್ನಿಸುತ್ತಿವೆ’ ಎಂದು ಆರೋಪಿಸಿದರು.
ಇಂತಹ ಶಕ್ತಿಗಳು ಎಲ್ಲ ಕಾಲದಲ್ಲಿಯೂ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಕುರಿತಂತೆಯೇ ಮಾತನಾಡುತ್ತವೆ. ಆದರೆ, ವಾಸ್ತವವಾಗಿ ದೇಶವನ್ನು ವಿಭಜಿಸುವ ಕೃತ್ಯದಲ್ಲಿ ತೊಡಗಿವೆ ಎಂದು ತರಾಟೆಗೆ ತೆಗೆದುಕೊಂಡರು.
ಅಭಿವೃದ್ಧಿ ಹೊಂದಿದ ಭಾರತ ನೋಡಲು ಅವರು ಬಯಸುವುದಿಲ್ಲ. ಅವರಿಗೆ ಹೊಂದುವುದು ದುರ್ಬಲ ಬಡ ಭಾರತ ಮಾತ್ರ. ಇಂತಹ ‘ಕೀಳು ರಾಜಕಾರಣ’ವೇ ಐದು ದಶಕ ಕಾಲ ಇತ್ತುನರೇಂದ್ರ ಮೋದಿ ಪ್ರಧಾನಮಂತ್ರಿ
‘ಏಕರೂಪ ನಾಗರಿಕ ಸಂಹಿತೆ ಜಾರಿಗೆ ಕ್ರಮ’
ಜಿಎಸ್‌ಟಿಯಿಂದ ‘ಒಂದು ರಾಷ್ಟ್ರ ಒಂದೇ ರೀತಿ ತೆರಿಗೆ’ ಜಾರಿಗೆ ಬಂದಿದೆ. ಈಗ ‘ಒಂದು ರಾಷ್ಟ್ರ ಒಂದೇ ಚುನಾವಣೆ’ ಜಾರಿಗೆ ಬರಲಿದೆ. ಮುಂದೆ ‘ಒಂದು ರಾಷ್ಟ್ರ ಒಂದೇ ನಾಗರಿಕ ಸಂಹಿತೆ’ ಜಾರಿಗೆ ತರಲು ಕ್ರಮವಹಿಸುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಇಲ್ಲಿ ಹೇಳಿದರು. ಕೇಂದ್ರ ಸರ್ಕಾರದ ಪ್ರತಿ ಯೋಜನೆ ಏಕತೆಯನ್ನೇ ಬಿಂಬಿಸಲಿದೆ ಎಂದರು. ಹರ್ ಘರ್ ಜಲ್ ಆಯುಷ್ಮಾನ್ ಭಾರತ್ ಆವಾಸ್ ಯೋಜನೆಗಳ ಮೂಲಕ ತಾರತಮ್ಯವಿಲ್ಲದೆ ಎಲ್ಲರಿಗೂ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.
‘ಗಡಿ ವಿಷಯದಲ್ಲಿ ರಾಜಿ ಪ್ರಶ್ನೆಯೇ ಇಲ್ಲ’
‘ಭಾರತ ತನ್ನ ಗಡಿಯ ಒಂದು ಇಂಚೂ ಭೂಮಿ ವಿಷಯದಲ್ಲೂ ರಾಜಿ ಆಗುವುದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಇಲ್ಲಿ ಹೇಳಿದರು. ‘ಸೇನೆಯು ದೇಶದ ಗಡಿ ರಕ್ಷಿಸಲಿದೆ ಎಂದು ಜನರು ವಿಶ್ವಾಸ ಹೊಂದಿದ್ದಾರೆ’ ಎಂದು ಹೇಳಿದರು. ಗಡಿಯ ಕಛ್ ವಲಯದಲ್ಲಿ ಯೋಧರ ಜೊತೆಗೆ ದೀಪಾವಳಿ ಆಚರಿಸಿ ಮಾತನಾಡಿದ ಸಂದರ್ಭದಲ್ಲಿ ಈ ಮಾತು ಹೇಳಿದರು. ‘ಭಾರತ ಇಂದು ಗಡಿ ವಿಷಯದಲ್ಲಿ ರಾಜಿ ಆಗುವ ಪ್ರಶ್ನೆಯೇ ಇಲ್ಲ. ನಮ್ಮ ಯೋಧರ ಬದ್ಧತೆ ಮೇಲೆ ನಮಗೆ ವಿಶ್ವಾಸವಿದೆ. ಇಂದು ದೇಶದ ಜನರು ಸುರಕ್ಷಿತವಾಗಿ ಇದ್ದಾರೆಂದರೆ ಅದಕ್ಕೆ ಯೋಧರೇ ಕಾರಣ’ ಎಂದು ಹೇಳಿದರು. ಭೂಸೇನೆ ನೌಕಾಪಡೆ ವಾಯುಪಡೆ ಯೋಧರ ಜೊತೆಗೂಡಿ ಕಛ್ ಜಿಲ್ಲೆಯ ಭಾರತ–ಪಾಕಿಸ್ತಾನ ಗಡಿಯಲ್ಲಿ ಪ್ರಧಾನಿ ಮೋದಿ ಗುರುವಾರ ದೀಪಾವಳಿ ಹಬ್ಬ ಆಚರಿಸಿದರು. ಏಕತಾ ನಗರ್‌ನಿಂದ ಕಛ್‌ಗೆ ವಾಯುಮಾರ್ಗದಲ್ಲಿ ಬಂದ ಅವರು ಅಲ್ಲಿಂದ ಸರ್ ಕ್ರೀಕ್ ವಲಯದ ಲಕ್ಕಿ ನಾಲಾ ತಲುಪಿದರು. ‘ಯೋಧರಿಗೆ ಸಿಹಿಯನ್ನು ಹಂಚಿ ಹಬ್ಬ ಆಚರಿಸಿದರು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.