ರಾಹುಲ್ ಗಾಂಧಿ
ನವದೆಹಲಿ: ‘ಅರಣ್ಯ ಹಕ್ಕು ಕಾಯ್ದೆಯನ್ನು ದುರ್ಬಲಗೊಳಿಸುವ ಮೂಲಕ ಕೇಂದ್ರ ಸರ್ಕಾರ ಬುಡಕಟ್ಟು ಜನರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಯಾವುದೇ ಬೆಲೆ ತೆತ್ತಾದರೂ ಕಾಂಗ್ರೆಸ್ ಪಕ್ಷ ಬುಡಕಟ್ಟು ಜನರ ಹಕ್ಕುಗಳನ್ನು ರಕ್ಷಣೆ ಮಾಡಲಿದೆ’ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗುರುವಾರ ತಿಳಿಸಿದ್ದಾರೆ.
ಬಹುಜನರಿಗೆ ಅನ್ಯಾಯ ಮಾಡಲೆಂದೇ ‘ದಾಖಲೆ ಅಳಿಸು, ಹಕ್ಕುಗಳನ್ನು ಕಸಿದುಕೋ’ ಎಂಬ ಹೊಸ ಅಸ್ತ್ರವನ್ನು ಬಿಜೆಪಿ ಪ್ರಯೋಗಿಸುತ್ತಿದೆ. ಮತದಾರರ ಪಟ್ಟಿಯಿಂದ ದಲಿತರು, ಹಿಂದುಳಿದ ವರ್ಗಗಳ ಜನರ ಹೆಸರುಗಳನ್ನು ತಗೆದು ಹಾಕುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಬುಡಕಟ್ಟು ಜನರ ಅರಣ್ಯ ಜಮೀನಿಗೆ ಸಂಬಂಧಿಸಿದ ಹಕ್ಕು ದಾಖಲೆಗಳನ್ನೇ ನಾಪತ್ತೆ ಮಾಡಲಾಗುತ್ತಿದೆ’ ಎಂದು ‘ಎಕ್ಸ್’ನಲ್ಲಿ ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ.
ಬಸ್ತಾರ್, ರಾಜನಂದಗಾಂವ್ ಸೇರಿದಂತೆ ಛತ್ತೀಸಗಢದ ಅರ್ಧಕ್ಕೂ ಹೆಚ್ಚು ಬುಡಕಟ್ಟು ಜನರ ಸಾವಿರಾರು ಅರಣ್ಯ ಜಮೀನು ಹಕ್ಕು ದಾಖಲೆಗಳು ಇದ್ದಕ್ಕಿದ್ದಂತೆ ನಾಪತ್ತೆಯಾಗಿವೆ ಎಂಬ ಮಾಧ್ಯಮಗಳ ವರದಿ ಕುರಿತು ರಾಹುಲ್ ಪ್ರತಿಕ್ರಿಯಿಸಿದ್ದಾರೆ.
‘ಬುಡಕಟ್ಟು ಜನರ ನೀರು, ಅರಣ್ಯ ಮತ್ತು ಜಮೀನನ್ನು ರಕ್ಷಿಸಲೆಂದೇ ಕಾಂಗ್ರೆಸ್ ಅರಣ್ಯ ಹಕ್ಕು ಕಾಯ್ದೆ ಜಾರಿಗೆ ತಂದಿತ್ತು. ಆದರೆ ಬಿಜೆಪಿ ಈ ಸಮುದಾಯದ ಪ್ರಾಥಮಿಕ ಹಕ್ಕನ್ನೇ ಕಸಿದುಕೊಳ್ಳುತ್ತಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.