ADVERTISEMENT

ಫಾರಂ 6 ಪರಿಶೀಲಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ: ಸುಪ್ರೀಂ ಕೋರ್ಟ್‌

ಪಿಟಿಐ
Published 26 ನವೆಂಬರ್ 2025, 16:18 IST
Last Updated 26 ನವೆಂಬರ್ 2025, 16:18 IST
<div class="paragraphs"><p>ಸುಪ್ರೀಂ ಕೋರ್ಟ್‌</p></div>

ಸುಪ್ರೀಂ ಕೋರ್ಟ್‌

   

ನವದೆಹಲಿ: ‘ದೇಶದಲ್ಲಿ ಈ ಹಿಂದೆ ಎಂದೂ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್‌) ನಡೆಸಿಲ್ಲ ಎನ್ನುವ ಕಾರಣಕ್ಕಾಗಿ ವಿವಿಧ ರಾಜ್ಯಗಳಲ್ಲಿ ಚುನಾವಣಾ ಆಯೋಗವು ಎಸ್‌ಐಆರ್‌ ಪ್ರಕ್ರಿಯೆ ನಡೆಸಲು ಈಗ ತೆಗೆದುಕೊಂಡಿರುವ ನಿರ್ಧಾರದ ಸಾಂವಿಧಾನಿಕ ಸಿಂಧುತ್ವವನ್ನು ವಿಚಾರಣೆಗೆ ಒಳಪಡಿಸಲು ಸಾಧ್ಯವಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಎಸ್‌ಐಆರ್‌ ನಡೆಸುವ ಆಯೋಗದ ನಿರ್ಧಾರದ ಸಾಂವಿಧಾನಿಕ ಸಿಂಧುತ್ವದ ಬಗ್ಗೆ ಸಲ್ಲಿಕೆಯಾಗಿರುವ ಹಲವು ಅರ್ಜಿಗಳ ಕುರಿತ ಅಂತಿಮ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯ ಕಾಂತ್‌ ಮತ್ತು ನ್ಯಾಯಮೂರ್ತಿ ಜಾಯ್‌ ಮಾಲ್ಯಾ ಬಾಗ್ಚಿ ಅವರ ಪೀಠವು ಬುಧವಾರ ಆರಂಭಿಸಿತು.

ADVERTISEMENT

‘ಫಾರಂ 6ರಲ್ಲಿ (ತಾನು ಮತದಾರ ಎಂಬ ಬಗ್ಗೆ ವ್ಯಕ್ತಿಯು ನೋಂದಣಿ ಮಾಡಿಕೊಳ್ಳಲು ಭರ್ತಿ ಮಾಡಬೇಕಾದ ನಮೂನೆ) ನಮೂದು ಮಾಡಲಾದ ಮಾಹಿತಿಗಳು ಸರಿ ಇದೆಯೇ ಇಲ್ಲವೇ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರ ಆಯೋಗಕ್ಕೆ ಇದೆ’ ಎಂದು ಪೀಠ ಅಭಿಪ್ರಾಯಪಟ್ಟಿತು.

ಅರ್ಜಿಯೊಂದರ ಕುರಿತು ಪ್ರತಿಕ್ರಿಯಿಸಿದ ‍ಪೀಠವು, ‘ವ್ಯಕ್ತಿ ಸಲ್ಲಿಸಿದ ಫಾರಂ 6 ಅನ್ನು ಸ್ವೀಕರಿಸುವುದಕ್ಕೆ ಮತ್ತು ನಿಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು, ನಿಮ್ಮ ಪ್ರಕಾರ ಚುನಾವಣಾ ಆಯೋಗವು ಅಂಚೆ ಕಚೇರಿಯೇ?’ ಎಂದು ‍ಪೀಠ ಕೇಳಿತು.

ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲ ಕಪಿಲ್ ಸಿಬಲ್‌, ‘ಪ್ರಾಥಮಿಕವಾಗಿ ಆಯೋಗದ ಕೆಲಸ ಅಂಚೆ ಕಚೇರಿಯದ್ದೇ ಹೌದು. ಆದರೆ, ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರ ಅಲ್ಲವಷ್ಟೆ’ ಎಂದರು. ಇದಕ್ಕೆ ಉತ್ತರಿಸಿದ ಪೀಠ, ‘ನಮೂನೆಯಲ್ಲಿನ ಮಾಹಿತಿಗಳನ್ನು ಸರಿಪಡಿಸುವುದಕ್ಕೆ ಆಯೋಗಕ್ಕೆ ಸಾಂವಿಧಾನಿಕ ಹಕ್ಕು ಇದೆ’ ಎಂದಿತು.

ಅಂತಿಮ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಲಾಯಿತು.

ಮೂರು ರಾಜ್ಯಗಳ ಅರ್ಜಿ ವಿಚಾರಣೆಗೆ ದಿನಾಂಕ ನಿಗದಿ: ತಮಿಳುನಾಡು ಮತ್ತು ಕೇರಳದಲ್ಲಿ ನಡೆಸುತ್ತಿರುವ ಎಸ್‌ಐಆರ್‌ ಬಗ್ಗೆ ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತು ಡಿ.1 ಒಳಗೆ ಪ್ರತಿಕ್ರಿಯಿಸಿ ಎಂದು ಆಯೋಗಕ್ಕೆ ಪೀಠ ಹೇಳತು. ಮುಂದಿನ ವಿಚಾರಣೆ ಡಿ.4ಕ್ಕೆ ನಡೆಯಲಿದೆ. ಕೇರಳದ ಅರ್ಜಿಯ ವಿಚಾರಣೆಯನ್ನು ಡಿ.2ಕ್ಕೆ ಮುಂದೂಡಿತು.

ಬೂತ್‌ ಮಟ್ಟದ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಎಸ್‌ಐಆರ್‌ ಕುರಿತು ಸಲ್ಲಿಕೆಯಾದ ಅರ್ಜಿಗಳ ವಿಚಾರಣೆಯನ್ನು ಡಿ.9ಕ್ಕೆ ನಡೆಸುವುದಾಗಿ ಪೀಠ ಹೇಳಿತು. ಈ ವಾರದ ಅಂತ್ಯದ ಒಳಗೆ ಪ್ರಕ್ರಿಯಿಸುವಂತೆ ಆಯೋಗಕ್ಕೆ ಸೂಚಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.