ADVERTISEMENT

ಯೋಗಿ ಆದಿತ್ಯನಾಥ್‌ ಸರ್ಕಾರ ಪತನಕ್ಕೆ ದಿನಗಣನೆ ಶುರುವಾಗಿದೆ: ಅಖಿಲೇಶ್‌

ಪಿಟಿಐ
Published 18 ಜನವರಿ 2020, 13:56 IST
Last Updated 18 ಜನವರಿ 2020, 13:56 IST
ಅಖಿಲೇಶ್‌ ಯಾದವ್‌
ಅಖಿಲೇಶ್‌ ಯಾದವ್‌   

ಲಖನೌ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ಅವರ ಯುಗ ಅಂತ್ಯಗೊಳ್ಳುತ್ತಿದ್ದು, ಬಿಜೆಪಿ ಸರ್ಕಾರ ಪತನಕ್ಕೆ ದಿನಗಣನೆ ಶುರುವಾಗಿದೆ ಎಂದು ಅಖಿಲೇಶ್‌ ಯಾದವ್‌ ಟೀಕಿಸಿದ್ದಾರೆ.

ಯೋಗಿ ಆದಿತ್ಯನಾಥ್‌ ಅವರು ಮುಖ್ಯಮಂತ್ರಿ ಆಗುವುದಕ್ಕೂ ಮುನ್ನ ಅವರೊಂದಿಗೆ ಗುರುತಿಸಿಕೊಂಡಿದ್ದ, ಜೊತೆಗೆ ಅವರ ಬಲಗೈ ಎಂದೇ ಹೇಳುತ್ತಿದ್ದ ಹಿಂದೂ ಯುವ ವಾಹಿನಿಯ ಮಾಜಿ ಮುಖ್ಯಸ್ಥ ಸುನೀಲ್ ಸಿಂಗ್‌ ಅವರು ಶನಿವಾರ ಸಮಾಜವಾದಿ ಪಕ್ಷ ಸೇರ್ಪಡೆಗೊಂಡರು. ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಕೆಲವರು ಈ ವೇಳೆ ಪಕ್ಷಕ್ಕೆ ಸೇರಿದರು.

ಸಮಾಜವಾದಿ ಪಕ್ಷದ ನಾಯಕರಾದ ಅಖಿಲೇಶ್ ಯಾದವ್ ಮತ್ತು ಮುಲಾಯಂ ಸಿಂಗ್ ಯಾದವ್ ಸಮ್ಮುಖದಲ್ಲಿ ಇವರು ಪಕ್ಷಕ್ಕೆ ಸೇರ್ಪಡೆಗೊಂಡರು.

ADVERTISEMENT

ಈ ವೇಳೆ ಮಾತನಾಡಿದ ಅಖಿಲೇಶ್‌, ‘ಆದಿತ್ಯನಾಥ್‌ ಅವರ ಸರ್ಕಾರ ಇನ್ನೆಷ್ಟು ದಿನ ಇರುತ್ತದೆ ಎನ್ನುವುದು ಈಗಾಗಲೇ ತಿಳಿಯುತ್ತಿದೆ ಮತ್ತು ಅವರ ಪತನಕ್ಕೆ ದಿನಗಣನೆ ಶುರುವಾಗಿದೆ’ ಎಂದು ಕುಟುಕಿದರು.

‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಅನ್ಯಾಯ ಮಾಡುತ್ತಿದೆ ಮತ್ತು ಪ್ರತಿಭಟಿಸುವವರ ವಿರುದ್ಧ ಸುಳ್ಳು ಪ್ರಕರಣಗಳನ್ನು ಹೇರುತ್ತಿದೆ. ಬಿಜೆಪಿಯೇ ಕೋಮುವಾದವನ್ನು ಪಸರಿಸುತ್ತಿದೆ ಮತ್ತು ಹಿಂದೂ–ಮುಸ್ಲೀಮರನ್ನು ಒಡೆಯುತ್ತಿದೆ’ ಎಂದು ಆರೋಪಿಸಿದರು.

‘ಹಿಂದೂ ಯುವ ವಾಹಿನಿಯ ಕಾರ್ಯಕರ್ತರು ನಮ್ಮ ಪಕ್ಷ ಸೇರಿರುವುದಕ್ಕೆ ಸಂತೋಷವಿದೆ ಮತ್ತು ಅವರು ಬಿಜೆಪಿಯ ನಿಜವಾದ ಉದ್ದೇಶವನ್ನು ತೆರೆದಿಡಲಿದ್ದಾರೆ ಎನ್ನುವ ಭರವಸೆ ಇದೆ’ ಎಂದು ಹೇಳಿದರು.

ಎಸ್‌ಪಿಗೆ ಸೇರ್ಪಡೆಗೊಂಡ ಸಿಂಗ್‌ ಮತ್ತು ಇತರೆ ಹಿಂದೂ ಯುವ ವಾಹಿನಿ (2002ರಲ್ಲಿ ಯೋಗಿ ಆದಿತ್ಯನಾಥ್‌ ಸ್ಥಾಪಿಸಿದ ಸಂಸ್ಥೆ) ಕಾರ್ಯಕರ್ತರನ್ನು ಅಶಿಸ್ತಿನ ಆರೋಪದ ಮೇಲೆ 2017ರಲ್ಲಿ ಹೊರಗೆ ಹಾಕಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.