ಡಾ.ಎಂ.ಆರ್.ಶ್ರೀನಿವಾಸನ್
Credit: PIB
ಮುಂಬೈ: ದೇಶದ ಅಣು ಶಕ್ತಿ ಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿದ, ಈ ಯೋಜನೆಯ ಪಿತಾಮಹ ಹೋಮಿ ಜಹಾಂಗೀರ್ ಬಾಬಾ ಮತ್ತು ವಿಕ್ರಂ ಸಾರಾಭಾಯ್ ಅವರಂಥ ವಿಜ್ಞಾನಿಗಳೊಂದಿಗೆ ಕೆಲಸ ಮಾಡಿದ ಪರಮಾಣು ವಿಜ್ಞಾನಿ ಬೆಂಗಳೂರಿನ ಎಂ.ಆರ್. ಶ್ರೀನಿವಾಸನ್ (95) ಅವರು ಮಂಗಳವಾರ ಬೆಳಗಿನ ಜಾವ 4ರ ಸುಮಾರಿಗೆ ತಮಿಳುನಾಡಿನ ಉದಕಮಂಡಲದಲ್ಲಿ ನಿಧನರಾದರು.
ಮಾಲೂರು ರಾಮಸ್ವಾಮಿ ಶ್ರೀನಿವಾಸನ್ ಅವರಿಗೆ ಪತ್ನಿ, ಮಗಳು ಇದ್ದಾರೆ. ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಅವರನ್ನು ಉದಕಮಂಡಲದ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಲಾಗಿತ್ತು. ಶ್ರೀನಿವಾಸನ್ ಅವರ ನಿಧನದ ಕುರಿತು ಅವರ ಕುಟುಂಬವು ಹೇಳಿಕೆ ಬಿಡುಗಡೆ ಮಾಡಿದೆ.
ಅದು 1955. ಮುಂಬೈನಲ್ಲಿರುವ ‘ಡಿಪಾರ್ಟ್‌ಮೆಂಟ್ ಆಫ್ ಅಟಾಮಿಕ್ ಎನರ್ಜಿ’ಯನ್ನು ಸೇರಿಕೊಂಡ ಶ್ರೀನಿವಾಸನ್ ಅವರಿಗೆ ಕೇವಲ 25 ವರ್ಷ. ಶ್ರೀನಿವಾಸನ್ ಅವರಿಗೆ ಹೋಮಿ ಬಾಬಾ ಮತ್ತು ವಿಕ್ರಂ ಸಾರಾಭಾಯ್ ಅವರ ಪರಿಚಯ, ಅವರೊಂದಿಗಿನ ಒಡನಾಟ ಆರಂಭವಾದದ್ದು ಇಲ್ಲಿಯೇ.
ಅಣುಶಕ್ತಿ ಶಕ್ತಿ ಆಯೋಗದ (ಎಆರ್‌ಸಿ) ಅಧ್ಯಕ್ಷರಾಗಿ, ಅಣುಶಕ್ತಿ ಶಕ್ತಿ ವಿಭಾಗದ ಕಾರ್ಯದರ್ಶಿಯಾಗಿ ಇವರ ಕೊಡುಗೆ ಮಹತ್ವದ್ದು. ಭಾರತೀಯ ಅಣು ಶಕ್ತಿ ನಿಗಮವನ್ನು (ಎನ್‌ಪಿಸಿಐಎಲ್) ಹುಟ್ಟುಹಾಕಿದ ಶ್ರೇಯ ಕೂಡ ಶ್ರೀನಿವಾಸನ್ ಅವರಿಗೆ ಸಲ್ಲುತ್ತದೆ.
ಭಾರತದ ಮೊದಲ ಪರಮಾಣು ಸಂಶೋಧನಾ ರಿಯಾಕ್ಟರ್ ‘ಅಪ್ಸರಾ’ವನ್ನು ಸ್ಥಾಪಿಸುವಲ್ಲಿಯೂ ಶ್ರೀನಿವಾಸನ್ ಅವರು ಪ್ರಮುಖ ಪಾತ್ರ ವಹಿಸಿದ್ದರು. ಹೋಮಿ ಬಾಬಾ ಮತ್ತು ವಿಕ್ರಮ್ ಸಾರಾಭಾಯ್ ಅವರ ನಾಯಕತ್ವದ ಬಳಿಕ ಅಣು ಶಕ್ತಿ ಯೋಜನೆಯಲ್ಲಿ ಶ್ರೀನಿವಾಸನ್ ಅವರ ನಾಯತ್ವ ಎದ್ದು ಕಾಣುತ್ತದೆ.
ಶ್ರೀನಿವಾಸನ್ ಅವರ ಕೊಡುಗೆಗಳನ್ನು ಪರಿಗಣಿಸಿ ಅವರಿಗೆ 1984ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು. ಬಳಿಕ 1990ರಲ್ಲಿ ಪದ್ಮಭೂಷಣ ಮತ್ತು 2015ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿತ್ತು.
ನಿರ್ವಹಿಸಿದ ಪ್ರಮುಖ ಸ್ಥಾನ
1959: ಭಾರತದ ಮೊದಲ ಅಣುಶಕ್ತಿ ಘಟಕ ನಿರ್ಮಾಣದ ಪ್ರಧಾನ ಪ್ರಾಜೆಕ್ಟ್ ಎಂಜಿನಿಯರ್ ಆಗಿ ನೇಮಕ
1967: ಮದ್ರಾಸ್ ಅಣು ಶಕ್ತಿ ಘಟಕದ ಮುಖ್ಯ ಪ್ರಾಜೆಕ್ಟ್ ಎಂಜಿನಿಯರ್ ಆಗಿ ನೇಮಕ
1974: ‘ಡಿಪಾರ್ಟ್‌ಮೆಂಟ್ ಆಫ್ ಅಟಾಮಿಕ್ ಎನರ್ಜಿ’ ಶಕ್ತಿ ಯೋಜನೆಗಳ ಎಂಜಿನಿಯರಿಂಗ್ ವಿಭಾಗಕ್ಕೆ ನಿರ್ದೇಶಕರಾಗಿ ನೇಮಕ
1984: ಅಣು ಶಕ್ತಿ ಮಂಡಳಿಯ ಮುಖ್ಯಸ್ಥರಾಗಿ ನೇಮಕ
1987: ಅಣು ಶಕ್ತಿ ಆಯೋಗದ ಮುಖ್ಯಸ್ಥ ಹುದ್ದೆಗೆ ಮತ್ತು ಅಣು ಶಕ್ತಿ ವಿಭಾಗದ ಕಾರ್ಯದರ್ಶಿ ಹುದ್ದೆಗೆ ನೇಮಕ. ಇದೇ ವರ್ಷವೇ ಎನ್‌ಪಿಸಿಐಎಲ್‌ನ ಸಂಸ್ಥಾಪಕ ಮುಖ್ಯಸ್ಥ
ಎನ್‌ಪಿಸಿಐಎಲ್‌ನ ಮುಖ್ಯಸ್ಥರಾಗಿದ್ದ ಶ್ರೀನಿವಾಸನ್ ಅವರು ಹಲವು ಮಹತ್ವದ ಕಾರ್ಯಗಳನ್ನು ಮಾಡಿದ್ದಾರೆ. ಇವರ ನೇತೃತ್ವದಲ್ಲಿ 18 ಅಣುಸ್ಥಾವರಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇವುಗಳಲ್ಲಿ 7 ಸ್ಥಾವರಗಳು ಕಾರ್ಯನಿರ್ವಹಿ ಸುತ್ತಿವೆ. 7 ಸ್ಥಾವರಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿವೆ ಮತ್ತು 4 ಸ್ಥಾವರ ನಿರ್ಮಾಣವು ಯೋಜನೆಯ ಹಂತದಲ್ಲಿದೆ
1990–92: ವಿಯೆನ್ನಾದಲ್ಲಿರುವ ಅಂತರರಾಷ್ಟ್ರೀಯ ಅಣು ಶಕ್ತಿ ಸಂಸ್ಥೆಗೆ ಹಿರಿಯ ಸಲಹೆಗಾರರಾಗಿ ಕೆಲಸ
1996–98: ವಿದ್ಯುತ್, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯಗಳ ಯೋಜನಾ ಆಯೋಗದ ಸದಸ್ಯ
2002–04 ಮತ್ತು 2006–08: ದೇಶದ ಭದ್ರತಾ ಸಲಹಾ ಮಂಡಳಿಯ ಸದಸ್ಯ
2002–04: ಕರ್ನಾಟಕದ ಉನ್ನತ ಶಿಕ್ಷಣದ ಕಾರ್ಯಪಡೆಯ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.