ADVERTISEMENT

ನಕಲಿ ಪ್ರಮಾಣ ಪತ್ರ: ಅಮಿತ್‌ ಜೋಗಿ ಬಂಧನ

ಪಿಟಿಐ
Published 3 ಸೆಪ್ಟೆಂಬರ್ 2019, 20:15 IST
Last Updated 3 ಸೆಪ್ಟೆಂಬರ್ 2019, 20:15 IST
   

ಬಿಲಾಸಪುರ (ಪಿಟಿಐ): ಚುನಾವಣಾ ಪ್ರಮಾಣಪತ್ರದಲ್ಲಿ ನಕಲಿ ಮಾಹಿತಿ ನೀಡಿದ ಆರೋಪಕ್ಕಾಗಿ ಛತ್ತೀಸಗಡದ ಮಾಜಿ ಮುಖ್ಯಮಂತ್ರಿ ಅಜಿತ್‌ ಜೋಗಿ ಪುತ್ರ ಅಮಿತ್‌ ಜೋಗಿ ಅವರನ್ನು ಬಂಧಿಸಲಾಗಿದೆ.

ಬಿಜೆಪಿ ನಾಯಕಿ ಸಮೀರಾ ಪೈಕ್ರ ನೀಡಿದ ದೂರಿನ ಅನ್ವಯ, ಕಳೆದ ಫೆಬ್ರುವರಿಯಲ್ಲಿ ಇವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು.ಆರು ತಿಂಗಳ ತನಿಖೆಯ ನಂತರ ಅಮಿತ್‌ ಸಿಂಗ್‌ ಅವರನ್ನು ಬಂಧಿಸಲಾಗಿದೆ.

ವಂಚನೆ ಮತ್ತುಸುಳ್ಳುಪ್ರಮಾಣ ಪತ್ರ ನೀಡಿದ ಆರೋಪದಲ್ಲಿ ಅಮಿತ್ ಜೋಗಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಮಿತ್‌ ಜೋಗಿ ಜಾಮೀನು ಅರ್ಜಿ ತಿರಸ್ಕರಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ADVERTISEMENT

ಸೆಕ್ಷನ್‌ 420 (ವಂಚನೆ), 467 (ನಕಲಿ ದಾಖಲೆ ಸೃಷ್ಟಿ), 468 (ನಕಲಿ ದಾಖಲೆ ಸೃಷ್ಟಿಸಿ ವಂಚನೆ) ಮತ್ತು 471 (ನಕಲಿ ದಾಖಲೆಯನ್ನು ಅಸಲಿಯೆಂದು ಬಳಸುವುದು) ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

2013ರ ವಿಧಾನಸಭಾ ಚುನಾವಣೆ ವೇಳೆ ಅಮಿತ್‌ ಜೋಗಿ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಜನ್ಮಸ್ಥಳದ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ. ಅವರು ಜನಿಸಿದ್ದು, ಅಮೆರಿಕದಲ್ಲಿ. ಆದರೆ ಅವರು ಸರ್ಬಹರ ಗೌರೆಲಾ ಗ್ರಾಮದಲ್ಲಿ ಜನಿಸಿರುವುದಾಗಿ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ಸಮೀರಾ ಪೈಕ್ರ ದೂರಿದ್ದರು.

2013ರಲ್ಲಿ ಅಮಿತ್‌ ಜೋಗಿಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದಬಿಲಾಸ್ಪುರದ ಮಾರ್ವಾಹಿ ವಿಧಾನಸಭಾ ಕ್ಷೇತ್ರದಿಂದ ಅಮಿತ್‌ ಜೋಗಿ ಗೆದ್ದಿದ್ದರು.

2013ರಲ್ಲಿ ಅಮಿತ್‌ ಸಿಂಗ್‌ ವಿರುದ್ಧ ಸೋಲುಂಡ ಪೈಕ್ರ, ಛತ್ತೀಸಗಡ ಹೈಕೋರ್ಟ್‌ನಲ್ಲಿ ಅಮಿತ್‌ ಜಾತಿ ಮತ್ತು ಜನ್ಮಸ್ಥಳವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು.

ಛತ್ತೀಸಗಡ ವಿಧಾಸಭಾ ಅವಧಿ (2013–18) ಈಗಾಗಲೇ ಮುಕ್ತಾಯ ಆಗಿರುವುದರಿಂದ ಈಅರ್ಜಿಯನ್ನು ಕಳೆದ ಜನವರಿಯಲ್ಲಿ ಹೈಕೋರ್ಟ್‌ ವಜಾಗೊಳಿಸಿತ್ತು.

‘ರಾಜಕೀಯ ದ್ವೇಷದಿಂದ ಮಗನ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ. ಹೈಕೋರ್ಟ್‌ ಮಗನ ಪರವಾಗಿ ತೀರ್ಪು ನೀಡಿದ್ದರೂ, ಆತನನ್ನು ಬಂಧಿಸಿರುವುದು ನ್ಯಾಯಾಂಗ ನಿಂದನೆಯಾಗುತ್ತದೆ. ಮುಖ್ಯಮಂತ್ರಿ ಭೂಪೇಶ್‌ ಬಘೆಲ್‌ ತಮ್ಮನ್ನು ಕಾನೂನಿಗಿಂತ ಶ್ರೇಷ್ಠ ಎಂದು ಭಾವಿಸಿದ್ದಾರೆ’ ಎಂದು ಅಜಿತ್‌ ಜೋಗಿ ಕಟುವಾಗಿ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.