ADVERTISEMENT

ಎಂಇಎಸ್‌ ನಿವೃತ್ತ ಅಧಿಕಾರಿಗಳು ಸೇರಿ ಎಂಟು ಮಂದಿಗೆ ಮೂರು ವರ್ಷ ಜೈಲು

ಪಿಟಿಐ
Published 23 ಜುಲೈ 2023, 13:52 IST
Last Updated 23 ಜುಲೈ 2023, 13:52 IST
ಜೈಲು ಶಿಕ್ಷೆ– ಪ್ರಾತಿನಿಧಿಕ ಚಿತ್ರ
ಜೈಲು ಶಿಕ್ಷೆ– ಪ್ರಾತಿನಿಧಿಕ ಚಿತ್ರ   

ನವದೆಹಲಿ: ಮಿಲಿಟರಿ ಎಂಜಿನಿಯರಿಂಗ್ ಸರ್ವೀಸಸ್‌ನಲ್ಲಿ (ಎಂಇಎಸ್‌) ನಡೆದಿದ್ದ ಹಗರಣಕ್ಕೆ ಸಂಬಂಧಿಸಿ ಸಿಬಿಐ ಎಫ್‌ಐಆರ್‌ ದಾಖಲಿಸಿ 36 ವರ್ಷಗಳ ಬಳಿಕ ಇಬ್ಬರು ನಿವೃತ್ತ ಲೆಫ್ಟಿನೆಂಟ್‌ ಕರ್ನಲ್‌, ಒಬ್ಬ ಮೇಜರ್‌ ಸೇರಿದಂತೆ ಎಂಟು ಮಂದಿಗೆ ಲಖನೌನ ವಿಶೇಷ ನ್ಯಾಯಾಲಯವು ಮೂರು ವರ್ಷಗಳ ಜೈಲುಶಿಕ್ಷೆ ವಿಧಿಸಿದೆ ಎಂದು ಸಿಬಿಐ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಅಲಹಾಬಾದ್‌ನ ಎಂಇಎಸ್‌ನಲ್ಲಿ ಆಗ ಕಮಾಂಡರ್‌ ವರ್ಕ್‌ ಎಂಜಿನಿಯರ್‌ (ಸಿಡಬ್ಲ್ಯುಇ) ಆಗಿದ್ದ ಲೆಫ್ಟಿನೆಂಟ್‌ ಕರ್ನಲ್‌ ಸತ್ಯಪಾಲ್‌ ಶರ್ಮಾ (ನಿವೃತ್ತ), ಗ್ಯಾರಿಸನ್‌ ಎಂಜಿನಿಯರ್‌ಗಳಾಗಿದ್ದ ವೈ.ಕೆ. ಉಪ್ಪಲ್‌, ಕೆ.ಎಸ್. ಸೈನಿ (ಲೆಫ್ಟಿನೆಂಟ್‌ ಕರ್ನಲ್‌), ವೀರೇಂದ್ರ ಕುಮಾರ್‌ ಜೈನ್‌, ಎಸ್‌.ಎಸ್‌. ಥಾಕ್ಕರ್‌ (ಮೇಜರ್‌) ಅವರಿಗೆ ಹಾಗೂ ವಿವಿಧ ಸಂಸ್ಥೆಗಳ ಮಾಲೀಕರಾದ ಅಶೋಕ್‌ ಕುಮಾರ್ ಡಿಯೋರಾ, ಅನಿಲ್‌ ಕುಮಾರ್‌ ಡಿಯೋರಾ, ಪವನ್‌ ಕುಮಾರ್ ಡಿಯೋರಾ ಎಂಬುವವರಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ ಎಂದು ವಿವರಿಸಿದ್ದಾರೆ.

1983ರ ನವೆಂಬರ್‌ನಿಂದ 1985ರ ನವೆಂಬರ್‌ವರೆಗೆ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಎಂಇಎಸ್‌ಗೆ ಸ್ಥಳೀಯವಾಗಿ ಖರೀದಿ ನಡೆಸಿರುವ ₹3.82 ಕೋಟಿಯ ಹಗರಣಕ್ಕೆ ಸಂಬಂಧಿಸಿ 1986 ಸೆಪ್ಟೆಂಬರ್‌ 25ರಂದು ಸಿಬಿಐ ಇವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು ಎಂದೂ ಹೇಳಿದ್ದಾರೆ.

ADVERTISEMENT

1990ರ ಡಿಸೆಂಬರ್‌ 19ರಂದು ಸಿಬಿಐ ಆರೋಪಪಟ್ಟಿ ಸಲ್ಲಿಸಿತ್ತು. ಪ್ರಕರಣದ ವಿಚಾರಣೆಗೆ ಅಲಹಾಬಾದ್ ಹೈಕೋರ್ಟ್ 2002ರಲ್ಲಿ ತಡೆಯಾಜ್ಞೆ ನೀಡಿತ್ತು. 2019ರಲ್ಲಿ ಈ ತಡೆಯಾಜ್ಞೆಯನ್ನು ತೆರವುಗೊಳಿಸಲಾಗಿತ್ತು ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.