ನವದೆಹಲಿ: ಮಾಜಿ ರಾಷ್ಟ್ರಪತಿ ಗ್ಯಾನಿ ಜೈಲ್ ಸಿಂಗ್ ಅವರ ಮೊಮ್ಮಗ ಇಂದ್ರಜಿತ್ ಸಿಂಗ್ ಹಾಗೂ ಇಬ್ಬರು ಪ್ರಾಧ್ಯಾಪಕರು ಗುರುವಾರ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ.
ದೆಹಲಿ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರಾದ ರತನ್ ಲಾಲ್ ಹಾಗೂ ಲಖನೌ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ರವಿಕಾಂತ್ ಅವರು ಇಂದ್ರಜಿತ್ ಸಿಂಗ್ ಅವರೊಂದಿಗೆ ನವದೆಹಲಿಯ ಅಕ್ಬರ್ ರೋಡ್‌ನಲ್ಲಿರುವ ಪಕ್ಷದ ಕಚೇರಿಗೆ ತೆರಳಿ, ಕಾಂಗ್ರೆಸ್‌ನ ಮಾಧ್ಯಮ ವಿಭಾಗದ ಮುಖ್ಯಸ್ಥರಾದ ಪವನ್ ಖೇರಾ ಉಪಸ್ಥಿತಿಯಲ್ಲಿ ಪಕ್ಷ ಸೇರಿದ್ದಾರೆ.
ಒಬಿಸಿ ವಿಭಾಗದ ಮುಖ್ಯಸ್ಥ ಅನಿಲ್ ಜೈಹಿಂದ್ ಹಾಗೂ ಪರಿಶಿಷ್ಟ ಜಾತಿ ವಿಭಾಗದ ಮುಖ್ಯಸ್ಥ ರಾಜೇಂದ್ರ ಪಾಲ್ ಗೌತಮ್ ಅವರೂ ಈ ವೇಳೆ ಉಪಸ್ಥಿತರಿದ್ದರು.
ಪಕ್ಷ ಸೇರಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಇಂದ್ರಜಿತ್ ಸಿಂಗ್, ‘ದುರ್ಬಲ ಆರ್ಥಿಕ ಸ್ಥಿತಿ, ಹಣದುಬ್ಬರದಂತಹ ಹಲವು ಪ್ರಮುಖ ಸಮಸ್ಯೆಗಳನ್ನು ದೇಶ ಎದುರಿಸುತ್ತಿದ್ದು, ಈ ಬಗ್ಗೆ ಚರ್ಚೆಗಳನ್ನು ನಡೆಸುವುದು ಅಗತ್ಯವಾಗಿದೆ. ಸಾಮಾಜಿಕ ನ್ಯಾಯಕ್ಕಾಗಿ ನಾನು ಸದಾ ಧ್ವನಿ ಎತ್ತಲು ಬದ್ಧನಾಗಿರುತ್ತೇನೆ’ ಎಂದಿದ್ದಾರೆ.
ಸಾಮಾಜಿಕ ನ್ಯಾಯಕ್ಕಾಗಿ ಚಳವಳಿ ಆರಂಭಿಸಿರುವ ರಾಹುಲ್ ಗಾಂಧಿ ಅವರು ಸಂಸತ್ತಿನಿಂದ ಹಿಡಿದ ಸಾಮಾನ್ಯ ಬೀದಿಗಳವರೆಗೆ ಪೂರ್ಣ ಬಲದೊಂದಿಗೆ ಚಳವಳಿಯನ್ನು ಮುನ್ನಡೆಸುತ್ತಿದ್ದಾರೆ. ಹೀಗಾಗಿಯೇ ಬಹುದೊಡ್ಡ ಸಂಖ್ಯೆಯಲ್ಲಿ ಜನರು ಅವರನ್ನು ಬೆಂಬಲಿಸುತ್ತಿದ್ದಾರೆ. ಇದೇ ವೇಳೆ ಈ ಮೂವರ ಸೇರ್ಪಡೆಯು ಪಕ್ಷದ ಹೋರಾಟಕ್ಕೆ ಬಲ ತುಂಬಲಿದೆ ಎಂದು ಗೌತಮ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.