ಹೈದರಾಬಾದ್: ‘ಫಾರ್ಮುಲಾ ಇ’ ರೇಸ್ ಪ್ರಕರಣ ಸಂಬಂಧ ತನಿಖೆಗೆ ಹಾಜರಾಗುವುದಕ್ಕೆ ತಮ್ಮ ವಕೀಲರೊಂದಿಗೆ ಬಂದಿದ್ದ ಬಿಆರ್‌ಎಸ್‌ನ ಕಾರ್ಯಾಧ್ಯಕ್ಷ ಕೆ.ಟಿ. ರಾಮ್ ರಾವ್ ಅವರನ್ನು ಭ್ರಷ್ಟಾಚಾರ ತಡೆ ಘಟಕದ ಕಚೇರಿಯೊಳಗೆ ಹೋಗುವುದಕ್ಕೆ ಪೊಲೀಸರು ತಡೆವೊಡ್ಡಿದ ನಾಟಕೀಯ ಬೆಳವಣಿಗೆ ಸೋಮವಾರ ನಡೆಯಿತು.
ಭ್ರಷ್ಟಾಚಾರ ತಡೆ ಘಟಕದ ಅಧಿಕಾರಿಗಳು ತನಿಖೆಗೆ ಹಾಜರಾಗುವಂತೆ ಕೆಟಿಆರ್ ಅವರಿಗೆ ಸಮನ್ಸ್ ನೀಡಿದ್ದರು. ವಕೀಲರನ್ನು ಕಚೇರಿಯೊಳಗೆ ಬಿಟ್ಟುಕೊಳ್ಳುವುದಕ್ಕೆ ಅವಕಾಶ ಮಾಡಿಕೊಡದ ಕಾರಣ ಕೆಟಿಆರ್ ಅವರು ಕಚೇರಿಯ ಆವರಣದಲ್ಲಿ ಕಾರಿನಲ್ಲಿಯೇ ಕೂತು ತಮ್ಮ ಲಿಖಿತ ಹೇಳಿಕೆಯನ್ನು ಅಧಿಕಾರಿಗಳಿಗೆ ನೀಡಿದರು.
‘ತನಿಖೆಯ ವೇಳೆ ವಕೀಲರನ್ನು ಜೊತೆಯಲ್ಲಿಟ್ಟುಕೊಳ್ಳುವುದು ವ್ಯಕ್ತಿಯೊಬ್ಬರ ಮೂಲಭೂತ ಹಕ್ಕು’ ಎಂದು ಕೆಟಿಆರ್ ಪರ ವಕೀಲ ಸೋಮಾ ಭರತ್ ಕುಮಾರ್ ಹೇಳಿದರು. ‘ವಕೀಲರು ನನ್ನ ಜೊತೆ ಇಲ್ಲದೆ ತನಿಖೆಗೆ ಒಳಗಾದರೆ, ರಾಜ್ಯ ಸರ್ಕಾರವು ನನ್ನ ಹೇಳಿಕೆಯನ್ನು ತಿರುಚುವ ಸಂಭವವಿದೆ. ನಮ್ಮ ಶಾಸಕ ಪಟ್ನಂ ನರೇಂದ್ರ ರೆಡ್ಡಿ ಅವರಿಗೂ ಹೇಳಿಕೆಯನ್ನೂ ಈ ಹಿಂದೆ ತಿರುಚಲಾಗಿತ್ತು’ ಎಂದು ಕೆಟಿಆರ್ ಅವರು ಹೇಳಿದರು.
2023ರಲ್ಲಿ ‘ಫಾರ್ಮುಲಾ ಇ’ ರೇಸ್ ಅನ್ನು ಆಯೋಜಿಸಿ, ಇದಕ್ಕಾಗಿ ಅನುಮತಿ ಇಲ್ಲದೆ ವಿದೇಶಿ ಕರೆನ್ಸಿ ಪಾವತಿ ಮಾಡಿದ್ದಕ್ಕಾಗಿ ಕೆಟಿಆರ್ ಅವರ ಮೇಲೆ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.