ADVERTISEMENT

ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ ಇಂದು ಶಂಕುಸ್ಥಾಪನೆ

ಹೋರಾಟಗಾರ ಮೌಲ್ವಿ ಅಹ್ಮದುಲ್ಲಾ ಷಾ ಅವರ ಹೆಸರು ಪರಿಗಣನೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2021, 16:21 IST
Last Updated 25 ಜನವರಿ 2021, 16:21 IST
ಮಸೀದಿಯ ನೀಲಿನಕ್ಷೆ
ಮಸೀದಿಯ ನೀಲಿನಕ್ಷೆ   

ಲಖನೌ: ಅಯೋಧ್ಯೆಯ ಸಮೀಪವಿರುವ ಧನ್ನೀಪುರ್‌ ಹಳ್ಳಿಯಲ್ಲಿ ನಿರ್ಮಾಣವಾಗಲಿರುವ ಮಸೀದಿಗೆ ಮಂಗಳವಾರ ಶಂಕುಸ್ಥಾಪನೆ ನೆರವೇರಲಿದೆ.

ಈ ಮಸೀದಿಗೆ 1857ರಲ್ಲಿ ಬ್ರಿಟೀಷರ ಆಳ್ವಿಕೆಯ ವಿರುದ್ಧ ನಡೆದ ಬಂಡಾಯದ ಹೋರಾಟಗಾರರಲ್ಲಿ ಒಬ್ಬರಾದ ಮೌಲ್ವಿ ಅಹ್ಮದುಲ್ಲಾ ಷಾ ಅವರ ಹೆಸರಿಡುವ ಸಾಧ್ಯತೆಯಿದೆ ಎಂದು ಇಂಡೊ ಇಸ್ಲಾಮಿಕ್‌ ಕಲ್ಚರಲ್‌ ಫೌಂಡೇಷನ್‌ ಟ್ರಸ್ಟ್‌ನ ಪದಾಧಿಕಾರಿಯೊಬ್ಬರು ಹೇಳಿದ್ದಾರೆ. ಮಸೀದಿ ನಿರ್ಮಾಣದ ಮೇಲ್ವಿಚಾರಣೆಗೆ ಸುನ್ನಿ ಸೆಂಟ್ರಲ್‌ ವಕ್ಫ್‌ ಮಂಡಳಿಯು ಈ ಟ್ರಸ್ಟ್‌ ರಚಿಸಿದೆ.

‘ಬಹಳ ಸರಳವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಅಯೋಧ್ಯೆ ಹಾಗೂ ಮುಂಬೈನ ಗಣ್ಯರು ಸೇರಿದಂತೆ ಅಂದಾಜು 100 ಜನರಷ್ಟೇ ಭಾಗವಹಿಸಲಿದ್ದಾರೆ. ಟ್ರಸ್ಟ್‌ ಸದಸ್ಯರು ಗಿಡಗಳನ್ನು ನೆಡಲಿದ್ದು, ಧ್ವಜಾರೋಹಣ ನೆರವೇರಲಿದೆ. ಮಕ್ಕಳು ರಾಷ್ಟ್ರಗೀತೆ ಹಾಡಲಿದ್ದಾರೆ’ ಎಂದು ಟ್ರಸ್ಟ್‌ನ ಕಾರ್ಯದರ್ಶಿ ಅಥರ್‌ ಹುಸೈನ್‌ ಹೇಳಿದರು.

ADVERTISEMENT

‘ಮಸೀದಿಗೆ ಷಾ ಅವರ ಹೆಸರು ಇಡುವ ಪ್ರಸ್ತಾವ ಹಿಂದೆ ಇತ್ತು. ಅವಧ್‌ ಪ್ರದೇಶದಲ್ಲಿ ಬ್ರಿಟಿಷ್‌ ಆಳ್ವಿಕೆಯ ವಿರುದ್ಧ ನಡೆದ ಬಂಡಾಯವು ಮೊದಲ ಸ್ವಾತಂತ್ರ್ಯದ ಯುದ್ಧ ಎಂದು ಪರಿಚಿತವಾಗಿದೆ. ಲಖನೌ ಸಮೀಪ ಚಿನ್‌ಹತ್‌ನಲ್ಲಿ ಬ್ರಿಟಿಷ್‌ ಸೇನೆಯ ವಿರುದ್ಧ ಹೋರಾಡಿದ್ದ ಷಾ ಆ ಯುದ್ಧವನ್ನು ಗೆದ್ದಿದ್ದರು. ಬ್ರಿಟೀಷರೂ ಷಾ ಅವರ ಎದೆಗಾರಿಕೆಯನ್ನು ಹೊಗಳಿದ್ದರು. ಷಾ ಅವರು ಭಾರತದ ಸಂಘಟಿತ ಸಂಸ್ಕೃತಿ ಹಾಗೂ ದೇಶಪ್ರೇಮದ ಸಂಕೇತವಾಗಿದ್ದರು’ ಎಂದು ಹುಸೈನ್‌ ಹೇಳಿದರು.

ಮೂಲಗಳ ಪ್ರಕಾರ, ಯಾವುದೇ ಪ್ರಮುಖ ರಾಜಕೀಯ ಗಣ್ಯರಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿಲ್ಲ. ಮಸೀದಿ ಆವರಣದೊಳಗೆ ಆಸ್ಪತ್ರೆ, ಗ್ರಂಥಾಲಯ, ಸಂಶೋಧನಾ ಕೇಂದ್ರ ಇರಲಿದೆ. ಸುಪ್ರೀಂ ಕೋರ್ಟ್‌ ಆದೇಶದಂತೆ ಸುನ್ನಿ ಸೆಂಟ್ರಲ್‌ ವಕ್ಫ್‌ ಮಂಡಳಿಗೆ ಐದು ಎಕರೆ ಜಾಗವನ್ನು ಮಸೀದಿ ನಿರ್ಮಾಣಕ್ಕೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.