ADVERTISEMENT

ಆಂಧ್ರ ಪ್ರದೇಶಕ್ಕೆ ಅಪ್ಪಳಿಸಿದ ‘ಪೆಥಾಯ್’: ನಾಲ್ವರು ಬಲಿ

ಎನ್‌ಡಿಆರ್‌ಎಫ್‌ ಜತೆಗೆ ನೌಕಾಪಡೆಯ ವಿಮಾನಗಳು, 1000 ಪೊಲೀಸರು, ರಾಜ್ಯ ಸರ್ಕಾರದ 10 ಸಾವಿರ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 18:39 IST
Last Updated 17 ಡಿಸೆಂಬರ್ 2018, 18:39 IST
   

ಅಮರಾವತಿ: ಆಂಧ್ರ ಪ್ರದೇಶದ ಕರಾವಳಿ ತೀರಕ್ಕೆ ಸೋಮವಾರ ಪೆಥಾಯ್ ಚಂಡಮಾರುತ ಅಪ್ಪಳಿಸಿದ ಪರಿಣಾಮ, ಭಾರಿ ಮಳೆ ಹಾಗೂ ಶೀತಗಾಳಿ ಉಂಟಾಗಿದೆ. ಮಳೆಯಿಂದಾಗಿ ಸಾವಿರಾರು ಎಕರೆ ಕೃಷಿಭೂಮಿ ಹಾನಿಗೀಡಾಗಿದೆ.

ಕರಾವಳಿಯ ಆರು ಜಿಲ್ಲೆಗಳಲ್ಲಿ ಮೊಬೈಲ್‌ ಟವರ್‌ಗಳು ಹಾನಿಗೊಳಗಾಗಿರುವ ಕಾರಣ ಮೊಬೈಲ್ ಸಂಪರ್ಕ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.

ಶೀತಗಾಳಿಯಿಂದಾಗಿ ಪ್ರಕಾಶಂ ಜಿಲ್ಲೆಯಲ್ಲಿ ಮೂವರು ವೃದ್ಧರು ಮೃತಪಟ್ಟಿದ್ದಾರೆ. ವಿಜಯವಾಡದಲ್ಲಿ ಗುಡ್ಡದ ಮಣ್ಣು ಕುಸಿದು 28 ವರ್ಷದ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಮೂಲಗಳು ತಿಳಿಸಿವೆ. ಉತ್ತರ ಕರಾವಳಿಯ ಎಲ್ಲೆಡೆ ಭಾರಿ ಕಟ್ಟೆಚ್ಚರ ಘೋಷಿಸಿರುವ ಆಂಧ್ರ ಪ್ರದೇಶ ಸರ್ಕಾರ, ಶಾಲೆಗಳಿಗೆ ರಜೆ ಘೋಷಿಸಿದೆ.

ADVERTISEMENT

ಪೂರ್ವ ಗೋದಾವರಿ ಜಿಲ್ಲೆಯಲ್ಲಿ 20 ಸಾವಿರ ಜನರನ್ನು ಪುನರ್ವಸತಿ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ದಕ್ಷಿಣ ರೈಲ್ವೆ ವಲಯವು 47 ಪ್ರಯಾಣಿಕ ರೈಲು ಗಳ ಸಂಚಾರವನ್ನು ರದ್ದುಪಡಿಸಿದೆ. ವಿಶಾಖಪಟ್ಟಣ ವಿಮಾನ ನಿಲ್ದಾಣದಿಂದ ಎಲ್ಲಾ 14 ವಿಮಾನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ನಿಲ್ದಾಣದಲ್ಲಿ ಸಿಲುಕಿ ರುವ 750 ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಮಾಡಲು ಅಧಿಕಾರಿಗಳು ಪರದಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.