ಮೋತಿಹಾರಿ (ಬಿಹಾರ): ಮಲಗುಂಡಿಯನ್ನು ಸ್ವಚ್ಛಗೊಳಿಸುತ್ತಿದ್ದ ವೇಳೆ ವಿಷಕಾರಿ ಅನಿಲ ಸೇವಿಸಿ 18ರಿಂದ 50 ವರ್ಷ ವಯಸ್ಸಿನ ನಾಲ್ಕು ಕಾರ್ಮಿಕರು ಗುರುವಾರ ಮೃತಪಟ್ಟಿದ್ದಾರೆ. ಘಟನೆಯು ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಮೋತಿಹಾರಿಯಲ್ಲಿ ನಡೆದಿದೆ.
ಇದರಿಂದ ಉದ್ರಿಕ್ತಗೊಂಡ ಗುಂಪೊಂದು ಖಾಸಗಿ ಕ್ಲಿನಿಕ್‌ವೊಂದನ್ನು ಧ್ವಂಸಗೊಳಿಸಿದೆ. ಆ್ಯಂಬುಲೆನ್ಸ್‌ಗೆ ಬೆಂಕಿ ಹಚ್ಚಲಾಗಿದೆ ಹಾಗೂ ಪೊಲೀಸರ ಮೇಲೂ ದಾಳಿ ನಡೆಸಲಾಗಿದೆ. ಈ ವೇಳೆ ಇಬ್ಬರು ಪೊಲೀಸರಿಗೆ ಗಾಯಗಳಾಗಿವೆ. ‘ಮಲಗುಂಡಿ ಸ್ವಚ್ಛತೆಗಾಗಿ ಐವರು ಕಾರ್ಮಿಕರನ್ನು ಗುಂಡಿಗೆ ಇಳಿಸಲಾಗಿತ್ತು. ಇವರಲ್ಲಿ ಒಬ್ಬರು ಬದುಕುಳಿದಿದ್ದಾರೆ. ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ’ ಎಂದು ಡಿಎಸ್‌ಪಿ ಕಾಂತೇಶ್ ಕುಮಾರ್ ಮಿಶ್ರಾ ಅವರು ಮಾಹಿತಿ ನೀಡಿದರು.
‘ವಿಷ ಅನಿಲ ಸೇವಿಸಿ ಮಲಗುಂಡಿಯೊಳಗೇ ಐವರೂ ಅಸ್ವಸ್ಥಗೊಂಡರು. ಇವರನ್ನು ತಕ್ಷಣವೇ ಹತ್ತಿರದ ಖಾಸಗಿ ಕ್ಲಿನಿಕ್‌ಗೆ ಕರೆದೊಯ್ಯಲಾಯಿತು. ಕ್ಲಿನಿಕ್ ತಲುಪುವ ವೇಳೆಗಾಗಲೇ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದರು. ಕ್ಲಿನಿಕ್‌ಗೆ ಕಾರ್ಮಿಕರನ್ನು ಕರೆದೊಯ್ಯತ್ತಿದ್ದಂತೆಯೇ ದೊಡ್ಡ ಗುಂಪೊಂದು ಜಮಾವಣೆಯಾಗಿತ್ತು. ವೈದ್ಯರ ನಿರ್ಲಕ್ಷ್ಯದಿಂದಲೇ ತಮ್ಮವರು ಮೃತಪಟ್ಟಿದ್ದಾರೆ ಎಂದು ಮೃತರ ಕುಟುಂಬದವರು ದೂರಿದರು. ನಂತರ ಪ್ರತಿಭಟನೆಯು ಹಿಂಸಾ ರೂಪ ಪಡೆದುಕೊಂಡಿತು’ ಎಂದು ಮಿಶ್ರಾ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.