ADVERTISEMENT

ಗಡಚಿರೋಲಿಯಲ್ಲಿ ಎನ್‌ಕೌಂಟರ್‌: ನಾಲ್ವರು ಮಾವೋವಾದಿಗಳು ಹತ

ಪಿಟಿಐ
Published 23 ಮೇ 2025, 14:41 IST
Last Updated 23 ಮೇ 2025, 14:41 IST
<div class="paragraphs"><p> ವಶಪಡಿಸಿಕೊಂಡ ವಸ್ತುಗಳು</p></div>

ವಶಪಡಿಸಿಕೊಂಡ ವಸ್ತುಗಳು

   ಟ್ವಿಟರ್ ಚಿತ್ರ

ಗಡಚಿರೋಲಿ (ಪಿಟಿಐ): ಮಹಾರಾಷ್ಟ್ರ ಮತ್ತು ಛತ್ತೀಸಗಢ ಗಡಿಯ ಗಡಚಿರೋಲಿ ಜಿಲ್ಲೆಯಲ್ಲಿ ವಿಶೇಷ ಪೊಲೀಸ್ ಕಮಾಂಡೋ ಪಡೆ ಮತ್ತು ಸಿಆರ್‌ಪಿಎಫ್‌ ಯೋಧರು ನಡೆಸಿದ ಗುಂಡಿನ ಕಾರ್ಯಾಚರಣೆಯಲ್ಲಿ ನಾಲ್ವರು ಮಾವೋವಾದಿಗಳು ಹತರಾಗಿದ್ದಾರೆ ಎಂದು ಶುಕ್ರವಾರ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಮಾವೋವಾದಿಗಳು(ನಕ್ಸಲರು) ಇರುವ ಕುರಿತು ಕವಾಂಡೆ ಪ್ರದೇಶದ ಮುಂಚೂಣಿ ಕಾರ್ಯಾಚರಣೆ ನೆಲೆಗೆ (ಎಫ್‌ಓಬಿ) ಗುಪ್ತಚರ ಇಲಾಖೆಯು ಖಚಿತ ಮಾಹಿತಿ ನೀಡಿತ್ತು. ಇದನ್ನು ಆಧರಿಸಿ ಗುರುವಾರ ಮಧ್ಯಾಹ್ನ ಕಾರ್ಯಾಚರಣೆ ಆರಂಭಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

ವಿಶೇಷ ಪೊಲೀಸ್ ಪಡೆಯ ಸಿ–60 ಘಟಕದ ಸಿಬ್ಬಂದಿ ಮತ್ತು ಸಿಆರ್‌ಪಿಎಫ್ ಯೋಧರು ಕವಾಂಡೆ ಮತ್ತು ನೆಲಗುಂಡ ಪ್ರದೇಶದ ಇಂದ್ರಾವತಿ ನದಿ ಸುತ್ತಮುತ್ತ ಸುರಿಯುತ್ತಿದ್ದ ಭಾರಿ ಮಳೆಯ ನಡುವೆಯೂ ಜಂಟಿ ಕಾರ್ಯಾಚರಣೆ ನಡೆಸಿದರು.

ಶುಕ್ರವಾರ ಬೆಳಿಗ್ಗೆ ಕಮಾಂಡೋಗಳು ಹಾಗೂ ನಕ್ಸಲರ ನಡುವೆ ಸುಮಾರು ಎರಡು ತಾಸು ಗುಂಡಿನ ಚಕಮಕಿ ನಡೆಯಿತು. ನಂತರ ನಾಲ್ವರು ನಕ್ಸಲರ ಶವಗಳು ಪತ್ತೆಯಾದವು. 

ಸ್ವಯಂಚಾಲಿತ ಬಂದೂಕು, ಮೂರು ಕೋವಿಗಳು, ವಾಕಿಟಾಕಿ, ಶಿಬಿರದ(ಟೆಂಟ್) ಸಲಕರಣೆಗಳು, ನಕ್ಸಲ್ ಸಾಹಿತ್ಯದ ಪುಸ್ತಕಗಳು ಸೇರಿದಂತೆ ಹಲವು ವಸ್ತುಗಳು ಸ್ಥಳದಲ್ಲಿ ಪತ್ತೆಯಾಗಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಛತ್ತೀಸಗಢದಲ್ಲಿ ಸಿಪಿಐ ಮಾವೋವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಬಸವರಾಜು ಸೇರಿ 27 ನಕ್ಸಲರು ಹತರಾದ ಎರಡು ದಿನಗಳ ನಂತರ ಮಹಾರಾಷ್ಟ್ರದಲ್ಲಿ ನಾಲ್ವರು ಮಾವೋವಾದಿಗಳ ಎನ್‌ಕೌಂಟರ್‌ ನಡೆದಿದೆ.

ಸುಕ್ಮಾದಲ್ಲೂ ಒಬ್ಬ ನಕ್ಸಲ್‌ ಸಾವು:

ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಜೊತೆ ನಕ್ಸಲರು ನಡೆಸಿದ ಗುಂಡಿನ ಚಕಮಕಿಯಲ್ಲಿ ನಕ್ಸಲರೊಬ್ಬರು ಸಾವಿಗೀಡಾಗಿದ್ದಾರೆ ಎಂದು ಶುಕ್ರವಾರ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಕಿಸ್ತಾರಂ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಗುರುವಾರ ಸಂಜೆ ನಕ್ಸಲ್‌ ನಿಗ್ರಹ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಗುಂಡಿನ ಚಕಮಕಿ ಆಗಿತ್ತು. ಇದರಲ್ಲಿ ಒಬ್ಬ ನಕ್ಸಲ್ ಹತರಾಗಿದ್ದು, ಆನಂತರವೂ ಗುಂಡಿನ ಚಕಮಕಿ ಮುಂದುವರೆದಿತ್ತು ಎಂದು ಅಧಿಕಾರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.