ADVERTISEMENT

ಪತ್ರಕರ್ತರ ವಿರೋಧ, ಟೀಕೆಗೂ ಜಗ್ಗದ ಸಚಿವೆ ‘ನಿರ್ಮಲಾ ಸೀತಾರಾಮನ್‌’

ಹಣಕಾಸು ಸಚಿವಾಲಯದ ಪ್ರವೇಶ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 20:00 IST
Last Updated 19 ಜುಲೈ 2019, 20:00 IST
ನಿರ್ಮಲಾ ಸೀತಾರಾಮನ್‌
ನಿರ್ಮಲಾ ಸೀತಾರಾಮನ್‌   

ನವದೆಹಲಿ: ಕೇಂದ್ರ ಹಣಕಾಸು ಸಚಿವಾಲಯಕ್ಕೆ ‘ಪೂರ್ವ ನಿಗದಿತ ಭೇಟಿಯ’ ಷರತ್ತಿನೊಂದಿಗೆ ಮಾಧ್ಯಮ ಪ್ರತಿನಿಧಿಗಳ ಪ್ರವೇಶ ನಿರ್ಬಂಧಿಸಿರುವುದಕ್ಕೆ ಪತ್ರಕರ್ತರ ವಲಯದಿಂದ ವಿರೋಧ ವ್ಯಕ್ತವಾಗಿದೆ.

ಸಚಿವಾಲಯದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು, ಸಚಿವರ ಭೇಟಿಗೆ ಮಾನ್ಯತೆ ಪಡೆದ ಪತ್ರಕರ್ತರಿಗೆ ಇದ್ದ ಮುಕ್ತ ಪ್ರವೇಶಕ್ಕೆ ಕಡಿವಾಣ ಹಾಕಿ ಸಚಿವೆ ನಿರ್ಮಲಾ ಸೀತಾರಾಮನ್‌ಆದೇಶಿಸಿದ್ದರು.

ಎಲ್ಲ ರೀತಿಯ ಭದ್ರತಾ ವಿಚಾರಣೆಯ ನಂತರವೇ ಪಿ.ಐ.ಬಿಯಿಂದ (ಪ್ರೆಸ್‌ ಇನ್ಫರ್‌ಮೇಷನ್‌ ಬ್ಯೂರೊ) ಮಾನ್ಯತೆ ಪಡೆದ ಪತ್ರಕರ್ತರ ಪ್ರವೇಶಕ್ಕೂ ನಿರ್ಬಂಧ ಹೇರಿರುವುದು ಮಾಧ್ಯಮ ವಲಯದ ಆಕ್ರೋಶಕ್ಕೆ ಕಾರಣವಾಗಿದೆ.

ADVERTISEMENT

‘ಯಾವ ವಿಭಾಗಕ್ಕೆ ತೆರಳಬೇಕು’, ‘ಯಾರನ್ನು ಭೇಟಿಯಾಗಬೇಕು’, ‘ಭೇಟಿಯ ಉದ್ದೇಶವೇನು’ ಎಂಬ ವಿವರ ಪಡೆಯುವ ಮೂಲಕ ಭೇಟಿ ನಿಗದಿಗೊಳಿಸಲಾಗುತ್ತಿದೆ. ಇದರಿಂದಾಗಿ ಅಧಿಕಾರಿಗಳು ಮಾಹಿತಿ ನೀಡಲು ಹಿಂಜರಿಯುವ ಸಾಧ್ಯತೆಗಳೂ ಇವೆ ಎಂಬುದು ವಿರೋಧಕ್ಕೆ ಕಾರಣ.

‘ಪತ್ರಕರ್ತರ ಪ್ರವೇಶಕ್ಕೆ ನಿರ್ಬಂಧ ಹೇರಿಲ್ಲ. ಬದಲಿಗೆ, ಭೇಟಿಯನ್ನು ಸುಗಮಗೊಳಿಸಿ ಇನ್ನಷ್ಟು ಅನುಕೂಲ ಕಲ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ’ ಎಂಬ ಸ್ಪಷ್ಟನೆಯನ್ನು ಸಚಿವರ ಕಚೇರಿ ನೀಡಿದೆ.

ಪ್ರವೇಶ ನಿರ್ಬಂಧ ಸರಿಯಲ್ಲ. ಇದರಿಂದ ಪತ್ರಕರ್ತರನ್ನು ಸುದ್ದಿ ಸಂಗ್ರಹಿಸುವುದರಿಂದ ತಡೆದಂತಾಗಲಿದೆ ಎಂದು ಸಂಪಾದಕರ ಮಂಡಳಿ, ವರದಿಗಾರರ ಮಂಡಳಿಗಳು ಮನವಿ ಸಲ್ಲಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.