ADVERTISEMENT

ಇ.ಡಿ ಅಧಿಕಾರಿಗಳ ಸೋಗಿನಲ್ಲಿ ಸಹೋದರರ ವಂಚನೆ: ಹಣ ಪಾವತಿಗೆ ಗೂಗಲ್ ಪೇ ಬಳಕೆ

ಪಿಟಿಐ
Published 17 ಮಾರ್ಚ್ 2024, 11:14 IST
Last Updated 17 ಮಾರ್ಚ್ 2024, 11:14 IST
   

ಭುವನೇಶ್ವರ: ಜಾರಿ ನಿರ್ದೇಶನಾಲಯದ ( ಇ.ಡಿ) ಅಧಿಕಾರಿಗಳಂತೆ ವರ್ತಿಸಿ ಸರ್ಕಾರಿ ಅಧಿಕಾರಿಗಳನ್ನು ವಂಚಿಸಿ, ಹಣ ವಸೂಲಿ ಮಾಡಿದ ಆರೋಪದ ಮೇಲೆ ಇಬ್ಬರು ಸಹೋದರರನ್ನು ಬಂಧಿಸಿರುವ ಘಟನೆ ಒಡಿಶಾದ ಧೆಂಕೆನಲ್ ಜಿಲ್ಲೆಯಲ್ಲಿ ನಡೆದಿದೆ.

ಆರೋಪಿಗಳನ್ನು ತಾರಿಣಿಸೇನ್ ಮೊಹಾಪಾತ್ರ (30) ಮತ್ತು ಬ್ರಹ್ಮಶಂಕರ್ ಮಹಾಪಾತ್ರ (27) ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯ ಪೊಲೀಸರ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಶನಿವಾರ ಧೆಂಕನಲ್‌ನಲ್ಲಿ ಆರೋಪಿಗಳನ್ನು ಬಂಧಿಸಿದೆ.

ADVERTISEMENT

ಆರೋಪಿಗಳು ದೊಡ್ಡ ಮೊತ್ತದ ಸಾಲವನ್ನು ಪಡೆದಿದ್ದರು. ಆದರೆ ಸಾಲ ತೀರಿಸಲು ಸಾಧ್ಯವಾಗದಿದ್ದಾಗ ಸರ್ಕಾರಿ ನೌಕರರಿಗೆ ವಂಚಿಸಲು ಈ ರೀತಿ ಯೋಜನೆ ರೂಪಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಭುವನೇಶ್ವರದ ಹೆಚ್ಚುವರಿ ಜಾರಿ ನಿರ್ದೇಶನಾಲಯದ ನಿರ್ದೇಶಕರು ಎಂದು ಹೇಳಿಕೊಂಡಿದ್ದ ಆರೋಪಿಗಳು ವಿವಿಧ ಸರ್ಕಾರಿ ಇಲಾಖೆಗಳ ಸುಮಾರು 300ಕ್ಕೂ ಹೆಚ್ಚು ಅಧಿಕಾರಿಗಳನ್ನು ದೂರವಾಣಿಯಲ್ಲಿ ಸಂಪರ್ಕಿಸಿದ್ದರು. ಕೆಲ ಅಧಿಕಾರಿಗಳಿಂದ ₹16 ಲಕ್ಷಕ್ಕೂ ಹೆಚ್ಚು ಹಣ ವಸೂಲಿ ಮಾಡುವಲ್ಲಿಯೂ ಯಶಸ್ವಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಫೋನ್‌ ಪೇ ಮತ್ತು ಗೂಗಲ್ ಪೇ ಮೂಲಕ ಹಣವನ್ನು ಪಡೆಯುತ್ತಿದ್ದರು. ಹಾಗೂ ಅಧಿಕಾರಿಗಳಿಗೆ ನಕಲಿ ಚೀಟಿಗಳನ್ನು ನೀಡುತ್ತಿದ್ದರು.

ಛತ್ರಪುರ ಹೆಚ್ಚುವರಿ ಜಿಲ್ಲಾಧಿಕಾರಿ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದ್ದು, ಒಂದು ಲ್ಯಾಪ್‌ಟಾಪ್, ಡೆಸ್ಕ್‌ಟಾಪ್, ಐದು ಮೊಬೈಲ್‌ಗಳು, ಬ್ಯಾಂಕ್ ಪಾಸ್‌ಬುಕ್, ಚೆಕ್‌ಬುಕ್‌ಗಳು, ನಕಲಿ ಗುರುತಿನ ಚೀಟಿಗಳು ಸೇರಿದಂತೆ 17 ಎಟಿಎಂ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಟಿಎಫ್ ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.