ADVERTISEMENT

18- 59 ವರ್ಷ ವಯಸ್ಸಿನವರಿಗೆ ಉಚಿತವಾಗಿ ಮುನ್ನೆಚ್ಚರಿಕೆ ಡೋಸ್

ಎಲ್ಲ ಸರ್ಕಾರಿ ಕೇಂದ್ರಗಳಲ್ಲಿ ಜುಲೈ 15ರಿಂದ ವಿಶೇಷ ಅಭಿಯಾನ

ಪಿಟಿಐ
Published 13 ಜುಲೈ 2022, 14:18 IST
Last Updated 13 ಜುಲೈ 2022, 14:18 IST
   

ನವದೆಹಲಿ: ಜುಲೈ 15ರಿಂದ ಪ್ರಾರಂಭವಾಗುವ 75 ದಿನಗಳ ವಿಶೇಷ ಅಭಿಯಾನದಲ್ಲಿ ಎಲ್ಲ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ 18ರಿಂದ 59 ವರ್ಷ ವಯಸ್ಸಿನವರಿಗೆ ಉಚಿತವಾಗಿ ಕೋವಿಡ್ ಲಸಿಕೆಯ ಮುನ್ನೆಚ್ಚರಿಕೆಯ ಡೋಸ್‌ಗಳನ್ನು ನೀಡಲಾಗುವುದು ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ.

‘ಮುನ್ನೆಚ್ಚರಿಕೆ ಡೋಸ್‌ ಅನ್ನು ಹೆಚ್ಚಿನ ಜನರಿಗೆ ನೀಡುವ ಗುರಿಯನ್ನು ಈ ಅಭಿಯಾನವು ಹೊಂದಿದೆ. ಸ್ವಾತಂತ್ರ್ಯದ 75ನೇ ವರ್ಷದ ನಿಮಿತ್ತ ಸರ್ಕಾರವು ಆಚರಿಸಲಿರುವ ಅಮೃತ ಮಹೋತ್ಸವದ ಭಾಗವಾಗಿ ಈ ಅಭಿಯಾನ ನಡೆಯಲಿದೆ’ ಎಂದೂ ಮೂಲಗಳು ಹೇಳಿವೆ.

‘ದೇಶದ ಒಟ್ಟು ಜನಸಂಖ್ಯೆಯಲ್ಲಿ ಬಹುಪಾಲು ಜನರು ಒಂಬತ್ತು ತಿಂಗಳ ಹಿಂದೆಯೇ ಕೋವಿಡ್‌ನ ಎರಡನೇ ಡೋಸ್‌ ಪಡೆದಿದ್ದಾರೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಮತ್ತು ಇತರ ಅಂತರರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳ ಪ್ರಕಾರ, ಕೋವಿಡ್ ಲಸಿಕೆಯ ಮೊದಲ ಮತ್ತು ಎರಡನೇ ಡೋಸ್ ಪಡೆದ ಆರು ತಿಂಗಳ ನಂತರ ಪ್ರತಿಕಾಯಗಳ ಮಟ್ಟವು ಕಡಿಮೆಯಾಗುತ್ತದೆ. ಬೂಸ್ಟರ್ ಡೋಸ್ ನೀಡುವುದರಿಂದ ಪ್ರತಿಕಾಯಗಳ ಮಟ್ಟವು ಹೆಚ್ಚಾಗಲಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ADVERTISEMENT

ಇದುವರೆಗೆ 18ರಿಂದ 59 ವರ್ಷ ವಯೋಮಾನದ ಒಟ್ಟು 77 ಕೋಟಿ ಜನಸಂಖ್ಯೆಯಲ್ಲಿ ಶೇ 1ಕ್ಕಿಂತ ಕಡಿಮೆ ಜನರಿಗೆ ಮಾತ್ರ ಮುನ್ನೆಚ್ಚರಿಕೆಯ ಡೋಸ್‌ಗಳನ್ನು ನೀಡಲಾಗಿದೆ. ಆದಾಗ್ಯೂ, 60 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಅಂದಾಜು 16 ಕೋಟಿ ಜನಸಂಖ್ಯೆಯಲ್ಲಿ ಶೇ 26ರಷ್ಟು ಜನರು ಬೂಸ್ಟರ್ ಡೋಸ್‌ಗಳನ್ನು ಪಡೆದಿದ್ದಾರೆ. ಇದರಲ್ಲಿ ಆರೋಗ್ಯ ಸಿಬ್ಬಂದಿ ಮತ್ತು ಇತರ ಮುಂಚೂಣಿ ಕಾರ್ಯಕರ್ತರು ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.