ADVERTISEMENT

ರಕ್ಷಣಾ ಇಲಾಖೆಯ ದಾಖಲೆ ಹೊಂದಿದ್ದ ದೆಹಲಿ ಪತ್ರಕರ್ತನ ಬಂಧನ

ಶೆಮಿಜ್‌ ಜಾಯ್‌
Published 19 ಸೆಪ್ಟೆಂಬರ್ 2020, 4:01 IST
Last Updated 19 ಸೆಪ್ಟೆಂಬರ್ 2020, 4:01 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಇಸ್ರೇಲ್‌ನ ವಿವಾದಿತ ಪೆಗಾಸಸ್ ಸ್ಪೈವೇರ್‌ ಮೂಲಕ ಗೂಢಚರ್ಯೆಗೆ ಒಳಪಟ್ಟಿದ್ದ ಫ್ರೀಲಾನ್ಸ್ ಪತ್ರಕರ್ತ, ರಾಜೀವ್ ಶರ್ಮಾ ಅವರನ್ನುಭದ್ರತೆಗೆ ಸಂಬಂಧಿಸಿದ ರಕ್ಷಣಾ ಇಲಾಖೆಯದಾಖಲೆಗಳನ್ನು ಹೊಂದಿದ್ದ ಆರೋಪದ ಮೇರೆಗೆ ಅಧಿಕೃತ ಗೌಪ್ಯತಾ ಕಾಯ್ದೆಯಡಿಬಂಧಿಸಲಾಗಿದೆ.

ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ, ದಿ ಟ್ರಿಬ್ಯೂನ್, ಫ್ರಿ ಪ್ರೆಸ್ ಜರ್ನಲ್, ಸಕಾಳ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳೊಂದಿಗೆ ರಾಜೀವ್ ಶರ್ಮಾ ಈ ಹಿಂದೆ ಕಾರ್ಯನಿರ್ವಹಿಸಿದ್ದರು. ಸೆ.14ರಂದು ಅವರನ್ನು ಬಂಧಿಸಲಾಯಿತು. ಸ್ಥಳೀಯ ನ್ಯಾಯಾಲಯವುಸೆ.21ರವರೆಗೆ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಿತ್ತು. ಸೆ.22ರಂದು ಅವರ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ.

ನವದೆಹಲಿಯ ಪಿತಾಂಪುರ ಪ್ರದೇಶದ ನಿವಾಸಿ ಶರ್ಮಾ, ಕಳೆದ ಎರಡು ದಶಕಗಳಿಂದ ವಿದೇಶಾಂಗ ವ್ಯವಹಾರಗಳ ಬಗ್ಗೆ ವರದಿ ಮಾಡುತ್ತಿದ್ದರು. ರಕ್ಷಣಾ ಇಲಾಖೆಗೆ ಸಂಬಂಧಿಸಿದ ಕ್ರೋಢೀಕೃತ (ಕ್ಲಾಸಿಫೈಡ್) ಮಾಹಿತಿಯನ್ನು ಅವರು ಹೊಂದಿದ್ದರು ಎಂದು ದೆಹಲಿ ಪೊಲೀಸ್‌ ವಕ್ತಾರರು ಶುಕ್ರವಾರ ರಾತ್ರಿ ಹೇಳಿದರು.

ADVERTISEMENT

ಬಂಧನ ಕುರಿತು ಹೆಚ್ಚಿನ ಮಾಹಿತಿ ನೀಡಲು ದೆಹಲಿ ಪೊಲೀಸರು ನಿರಾಕರಿಸಿದ್ದಾರೆ. 'ಸೂಕ್ತಕಾಲದಲ್ಲಿ ಎಲ್ಲ ಮಾಹಿತಿ ಹಂಚಿಕೊಳ್ಳಲಾಗುವುದು' ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ವಿವಾದಿತ ಸ್ಪೈವೇರ್ 'ಪೆಗಾಸಸ್' ಮೂಲಕ ನಿಗಾವಣೆಗೆ ಒಳಪಟ್ಟಿರುವ 121 ಮಂದಿಯಲ್ಲಿ ರಾಜೀವ್ ಶರ್ಮಾ ಸಹ ಇದ್ದಾರೆ ಎಂದುಕೆನಡಾ ಮೂಲದ ಇಂಟರ್ನೆಟ್‌ ಸಂಶೋಧನಾ ಏಜೆನ್ಸಿ 'ಸಿಟಿಜನ್ಸ್ ಲ್ಯಾಬ್' ಈ ಹಿಂದೆ ಎಚ್ಚರಿಸಿತ್ತು. ಈ ಕುರಿತು ಶರ್ಮಾ ಅವರಿಗೆ 'ಸಿಟಿಜನ್ಸ್‌ ಲ್ಯಾಬ್' ಮಾಹಿತಿ ನೀಡಿತ್ತು.

ಶರ್ಮಾ ಅವರ ಜೊತೆಗೆ ಚಳವಳಿಗಾರರು ಮತ್ತು ಚಿಂತಕರಾದ ಆನಂದ್ ತೆಲ್ತುಂಬ್ದೆ, ಶಾಲಿನಿ ಗೇರಾ ಮತ್ತು ಬೇಲಾ ಭಾಟಿಯಾ ಸೇರಿದಂತೆ ಹಲವರ ಮೇಲೆಯೂ ಪೆಗಾಸಸ್ ಮೂಲಕ ಕಣ್ಗಾವಲು ಇರಿಸಲಾಗಿತ್ತು.

ಮೆಸೆಂಜಿಂಗ್‌ ಮೂಲಕ 'ಪೆಗಾಸಸ್' ಸ್ಪೈವೇರ್ ನುಸುಳಲು ಫೇಸ್‌ಬುಕ್ ಸಹಕರಿಸುತ್ತಿದೆ ಎಂಬ ಆರೋಪ ಈ ಹಿಂದೆ ಕೇಳಿಬಂದಿತ್ತು.

ಇಸ್ರೇಲ್‌ನ ಎನ್‌ಎಸ್‌ಒ ಸಂಸ್ಥೆಯು ತಾನು ಕೇವಲ ಅಧಿಕೃತ ಏಜೆನ್ಸಿಗಳಿಗೆ ಮಾತ್ರವೇ ಪೆಗಾಸಸ್ ಸ್ಪೈವೇರ್ ಮಾರಿದ್ದೇನೆ ಎಂದು ಹೇಳಿತ್ತು. ಕೇಂದ್ರ ಸರ್ಕಾರಕ್ಕೂ ಈ ವಿವಾದಕ್ಕೂ ಸಂಬಂಧವೇ ಇಲ್ಲ ಎಂದು ಸರ್ಕಾರ ಸ್ಪಷ್ಟನೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.