ADVERTISEMENT

ಹಣ ಅಕ್ರಮ ವರ್ಗಾವಣೆ: ಆರೋಪಪಟ್ಟಿಯಲ್ಲಿ ಫಾರೂಕ್‌ ಅಬ್ದುಲ್ಲಾ ಹೆಸರು

ಪಿಟಿಐ
Published 26 ಜುಲೈ 2022, 14:10 IST
Last Updated 26 ಜುಲೈ 2022, 14:10 IST
ಫಾರೂಕ್‌ ಅಬ್ದುಲ್ಲಾ
ಫಾರೂಕ್‌ ಅಬ್ದುಲ್ಲಾ   

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್‌ ಸಂಸ್ಥೆಯಲ್ಲಿ (ಜೆಕೆಸಿಎ) ನಡೆದಿದೆ ಎನ್ನಲಾಗಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಮಂಗಳವಾರ ಹೊಸದಾಗಿ ಆರೋಪಪಟ್ಟಿ ಸಲ್ಲಿಸಿರುವ ಜಾರಿ ನಿರ್ದೇಶನಾಲಯವು (ಇ.ಡಿ) ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಹಾಗೂ ಇತರರ ಹೆಸರುಗಳನ್ನು ಅದರಲ್ಲಿ ಸೇರ್ಪಡೆ ಮಾಡಿದೆ.

‘ಈ ಹಿಂದೆ ಜೆಕೆಸಿಎಯಲ್ಲಿ ಖಜಾಂಚಿಗಳಾಗಿ ಕೆಲಸ ಮಾಡಿದ್ದ ಅಹ್ಸಾನ್‌ ಅಹ್ಮದ್‌ ಮಿರ್ಜಾ ಹಾಗೂ ಮೀರ್‌ ಮಂಜೂರ್‌ ಗಜಾಫರ್‌ ಅವರ ಹೆಸರೂ ಆರೋಪಪಟ್ಟಿಯಲ್ಲಿ ಇದೆ. ಆಗಸ್ಟ್‌ 27ರಂದು ವಿಚಾರಣೆಗೆ ಹಾಜರಾಗುವಂತೆ ಎಲ್ಲರಿಗೂ ಸಮನ್ಸ್‌ ನೀಡಲಾಗಿದೆ’ ಎಂದು ಇ.ಡಿ ತಿಳಿಸಿದೆ.

ಮಿರ್ಜಾ ಅವರನ್ನು ಇ.ಡಿ ಅಧಿಕಾರಿಗಳು 2019ರ ಸೆಪ್ಟೆಂಬರ್‌ನಲ್ಲಿ ಬಂಧಿಸಿದ್ದರು. ಅದೇ ವರ್ಷದ ನವೆಂಬರ್‌ನಲ್ಲಿ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ಅದರ ವಿಚಾರಣೆ ಪ್ರಗತಿಯಲ್ಲಿದೆ. ಪ್ರಕರಣ ಸಂಬಂಧ ಅಬ್ದುಲ್ಲಾ ಹಾಗೂ ಇತರರಿಗೆ ಸಂಬಂಧಿಸಿದ ₹21.55 ಕೋಟಿ ಮೌಲ್ಯದ ಸ್ವತ್ತುಗಳನ್ನೂ ಜಪ್ತಿ ಮಾಡಿತ್ತು.

‘2005–06 ರಿಂದ 2011–12ರ ಅವಧಿಯಲ್ಲಿ ಜೆಕೆಸಿಎಗೆ ಬಿಸಿಸಿಐಯಿಂದ ₹94.06 ಕೋಟಿ ಅನುದಾನ ಮಂಜೂರಾಗಿತ್ತು. ಆ ಮೊತ್ತ ಮೂರು ಖಾತೆಗಳಿಗೆ ಜಮೆ ಆಗಿತ್ತು. ಜೆಕೆಸಿಎ ಹೆಸರಿನ ಅಡಿಯಲ್ಲಿ ಮತ್ತಷ್ಟು ಬ್ಯಾಂಕ್‌ ಖಾತೆಗಳನ್ನು ತೆರೆದು ಆ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿತ್ತು’ ಎಂದು ಇ.ಡಿ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.