ADVERTISEMENT

11 ಕೋಟಿ ಕೋವಿಶೀಲ್ಡ್ ಲಸಿಕೆ ಪೂರೈಕೆಗೆ ಎಸ್‌ಐಐಗೆ ₹1700 ಕೋಟಿ ಬಿಡುಗಡೆ

ರಾಜ್ಯಗಳಿಗೆ ಉಚಿತ ಲಸಿಕೆ ಪೂರೈಕೆ, ಹೆಚ್ಚುವರಿ ಲಸಿಕೆ ಪೂರೈಕೆಗೂ ಕ್ರಮ: ಆರೋಗ್ಯ ಸಚಿವಾಲಯ

ಪಿಟಿಐ
Published 3 ಮೇ 2021, 11:19 IST
Last Updated 3 ಮೇ 2021, 11:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಮೇ, ಜೂನ್ ಮತ್ತು ಜುಲೈ ತಿಂಗಳಲ್ಲಿ 11 ಕೋಟಿ ಡೋಸ್‌ಗಳಷ್ಟು ಕೋವಿಶೀಲ್ಡ್ ಕೊರೊನಾ ಲಸಿಕೆ ಪೂರೈಸುವುದಕ್ಕಾಗಿ ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾಕ್ಕೆ(ಎಸ್ಐಐ) ಏಪ್ರಿಲ್ 28ರಂದು ಕೇಂದ್ರ ಸರ್ಕಾರ ₹1732.50 ಕೋಟಿ ಪೂರ್ಣ ಮುಂಗಡ ಹಣವನ್ನು ಬಿಡುಗಡೆ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ

ಟಿಡಿಎಸ್‌ ತೆರಿಗೆ ಕಟಾವಾದ ನಂತರ ಉಳಿದ ₹1699.50 ಕೋಟಿ ಹಣವನ್ನು ಏ.28ರಂದೇ ಎಸ್‌ಐಐ ಸಂಸ್ಥೆ ಸ್ವೀಕರಿಸಿದೆ ಎಂದು ಅದು ಹೇಳಿದೆ.

‘ಸದ್ಯಕ್ಕೆ ಸರ್ಕಾರ ಲಸಿಕೆಗಳಿಗೆ ಸಂಬಂಧಿಸಿದಂತೆ ಯಾವುದೇ ಹೊಸ ಆದೇಶ ಹೊರಡಿಸಿಲ್ಲ‘ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿ ‌‌ಸತ್ಯಕ್ಕೆ ದೂರವಾದ್ದು ಎಂದು ಸ್ಪಷ್ಟಪಡಿಸಿರುವ ಸಚಿವಾಲಯ, ಸರ್ಕಾರದ ಕೊನೆಯ ಅದೇಶದಲ್ಲಿ 10 ಕೋಟಿ ಡೋಸ್‌ಗಳ ಕೋವಿಶೀಲ್ಡ್ ಲಸಿಕೆ ಸರಬರಾಜು ಮಾಡುವಂತೆ ಕೇಳಲಾಗಿತ್ತು. ಅದರಂತೆ ಮೇ 3 ರವರೆಗೆ 8.744 ಕೋಟಿ ಡೋಸ್‌ಗಳಷ್ಟು ಲಸಿಕೆ ಸರಬರಾಜಾಗಿದೆ ಎಂದು ಸಚಿವಾಲಯ ತಿಳಿಸಿದೆ.

ADVERTISEMENT

ಇದಲ್ಲದೇ, 5 ಕೋಟಿ ಡೋಸ್‌ಗಳಷ್ಟು ಕೋವಾಕ್ಸಿನ್ ಲಸಿಕೆಯನ್ನು ಮೇ, ಜೂನ್ ಮತ್ತು ಜುಲೈತಿಂಗಳೊಳಗೆ ಪೂರೈಸುವುದಕ್ಕಾಗಿ ಏ.28ರಂದು ಭಾರತ್‌ ಬಯೋಟೆಕ್ ಕಂಪನಿಗೆ ₹787.50 ಕೋಟಿ (ಟಿಡಿಎಸ್‌ ಕಡಿತಗೊಂಡು 772.50) ಪೂರ್ಣ ಹಣವನ್ನು ಏಪ್ರಿಲ್ 28ರಂದು ಬಿಡುಗಡೆ ಮಾಡಲಾಗಿದೆ. ದಿನ ಕಂಪನಿಯವರು ಹಣವನ್ನು ಸ್ವೀಕರಿಸಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಕೇಂದ್ರ ಸರ್ಕಾರ ಮೇ 2 ರಂದು16.54 ಕೋಟಿ ಡೋಸ್‌ಗಳಷ್ಟು ಲಸಿಕೆಗಳನ್ನು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಪೂರೈಕೆ ಮಾಡಿದೆ. ಸಚಿವಾಲಯದ ಬಳಿ ಇನ್ನೂ 78 ಲಕ್ಷ ಡೋಸ್‌ಗಳಷ್ಟು ಲಸಿಕೆಗಳಿವೆ. ಮುಂದಿನ ಮೂರು ದಿನಗಳಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 54 ಲಕ್ಷ ಡೋಸ್‌ಗಳಷ್ಟು ಲಸಿಕೆಗಳನ್ನು ಸರಬರಾಜು ಮಾಡಲಾಗುತ್ತದೆ‘ ಎಂದು ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.