ADVERTISEMENT

ಭಾರತ ಸೇನೆಯ ದಾಳಿಗೆ ಪ್ರತಿಕ್ರಿಯೆ ನೀಡಲು ನಾವು ಸಿದ್ಧ: ಪಾಕ್‌

ಏಜೆನ್ಸೀಸ್
Published 26 ಫೆಬ್ರುವರಿ 2019, 10:54 IST
Last Updated 26 ಫೆಬ್ರುವರಿ 2019, 10:54 IST
   

ನವದೆಹಲಿ: ಭಾರತದ ದಾಳಿಯನ್ನು ದುಸ್ಸಾಹಸ ಎಂದು ಕರೆದಿರುವ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹಮ್ಮದ್ ಖುರೇಷಿ, ‘ಇದಕ್ಕೆ ತಕ್ಕ ಉತ್ತರ ನೀಡಲು ನಾವೂ ಸಿದ್ಧರಾಗಿದ್ದೇವೆ’ ಎಂದು ಭಾರತಕ್ಕೆ ಉತ್ತರ ನೀಡಿದ್ದಾರೆ.

ಆಡಳಿತ ಪಕ್ಷವಾದ ಪಾಕಿಸ್ತಾನ ತೆಹರೀಕ್‌ ಎ ಇನ್ಸಾಫ್‌ (ಪಿಟಿಐ) ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಮಾತನಾಡಿರುವ ಖುರೇಷಿ,'ಭಾರತ ತಪ್ಪುದಾರಿಯಲ್ಲಿ ನಡೆದರೆ ಅದಕ್ಕೆ ಪ್ರತ್ಯುತ್ತರ ನೀಡಲು ಪಾಕಿಸ್ತಾನವೂ ಸಂಪೂರ್ಣ ಸಿದ್ಧವಾಗಿದೆ. ನೀವು ಪಾಕಿಸ್ತಾನಕ್ಕೆ ಸವಾಲು ಹಾಕಬೇಡಿ’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಭಾರತದಲ್ಲಿ ಒಂದು ವರ್ಗವಿದೆ, ಚುನಾವಣೆಯ ಲಾಭಕ್ಕಾಗಿ ಗಡಿ ಭಾಗದಲ್ಲಿ ಶಾಂತಿ ಕದಡಲು ಯತ್ನಿಸುತ್ತಲೇ ಇರುತ್ತದೆ. ಭಾರತ ಸರ್ಕಾರಕ್ಕೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಅಗತ್ಯವಿದೆ. ಸ್ವಾರ್ಥದಿಂದ ಆ ಭಾಗದಲ್ಲಿ ಅಶಾಂತಿ ಸೃಷ್ಟಿಸುತ್ತಿದ್ದಾರೆ’ ಎಂದು ಹೇಳಿದರು.

ADVERTISEMENT

‘ಪಾಕಿಸ್ತಾನ ಅಂತರರಾಷ್ಟ್ರೀಯ ವೇದಿಕೆಗಳ ಸಹಾಯ ಪಡೆಯಲಿದೆ. ಪ್ರತೀಕಾರ ಪಡೆಯಲು ಸಜ್ಜಾಗಿರುವ ಭಾರತದ ಮುಖವನ್ನು ಅಲ್ಲಿ ಬಿಚ್ಚಿಡುತ್ತೇವೆ’ ಎಂದರು.

ಬಲಾಕೋಟ್ ಉಗ್ರರ ನೆಲೆ ಮೇಲೆ ಭಾರತ ದಾಳಿ ನಡೆಸಿದ ನಂತರ ತುರ್ತು ಸಭೆ ನಡೆಸಿದ ಪಾಕಿಸ್ತಾನ ಯಾವೆಲ್ಲ ಕ್ರಮಕೈಗೊಳ್ಳಬೇಕು ಎಂಬ ಬಗ್ಗೆ ಖುರೇಷಿ ತುರ್ತು ಸಭೆ ಕರೆದಿದ್ದಾರೆ.

ಗಡಿ ನಿಯಂತ್ರಣ ರೇಖೆ ಬಳಿಯ ಭಾರತೀಯ ವಾಯುಪಡೆ ನಡೆಸಿದ ದಾಳಿಯನ್ನು ಪಾಕಿಸ್ತಾನ ರಕ್ಷಣಾ ಇಲಾಖೆ ಖಂಡಿಸಿದೆ. ಈ ವೇಳೆ ಪ್ರತಿಕ್ರಿಯಿಸಿರುವ ಪಾಕ್ ಪ್ರಧಾನಿ ಇಮ್ರಾನ್‌ ಖಾನ್‌, ‘ಸಮಯ ಮತ್ತು ಸ್ಥಳವನ್ನು ಆಯ್ಕೆ ಮಾಡಿ ಪಾಕಿಸ್ತಾನ ಪ್ರತಿಕ್ರಿಯೆ ನೀಡಲಿದೆ’ ಎಂದರು.‘ಎಲ್ಲದಕ್ಕೂ ಸಿದ್ಧರಾಗಿರಿ’ ಎಂದು ಪಾಕ್‌ ಸೇನೆಗೆ ನಿರ್ದೇಶನವನ್ನೂ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.