ADVERTISEMENT

ಗೌರಿ ಲಂಕೇಶ್ ಕೊಲೆ ಪ್ರಕರಣ: ಹೈಕೋರ್ಟ್ ಆದೇಶ ರದ್ದುಗೊಳಿಸಿದ ಸುಪ್ರಿಂಕೋರ್ಟ್‌

ಪಿಟಿಐ
Published 21 ಅಕ್ಟೋಬರ್ 2021, 7:45 IST
Last Updated 21 ಅಕ್ಟೋಬರ್ 2021, 7:45 IST
ಗೌರಿ ಲಂಕೇಶ್
ಗೌರಿ ಲಂಕೇಶ್   

ನವದೆಹಲಿ: ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಆರೋಪಿ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ(ಕೆಸಿಒಸಿಎ) ಅಡಿಯಲ್ಲಿ ಸಲ್ಲಿಸಿದ್ದ ದೋಷಾರೋಪ ಪಟ್ಟಿಯನ್ನು ರದ್ದುಗೊಳಿಸಿರುವ ಕರ್ನಾಟಕ ಹೈಕೋರ್ಟ್‌ ಆದೇಶವನ್ನು ಸುಪ್ರೀಂಕೋರ್ಟ್‌ ಗುರುವಾರ ವಜಾಗೊಳಿಸಿದೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್‌ ನೇತೃತ್ವದ ಪೀಠ, ಈ ಸಂಬಂಧ ಹೈಕೋರ್ಟ್‌ ಆದೇಶ ಪ್ರಶ್ನಿಸಿ ಈ ವರ್ಷದ ಏಪ್ರಿಲ್ 22ರಂದು ರಾಜ್ಯ ಸರ್ಕಾರ ಮತ್ತು ಗೌರಿ ಅವರ ಸಹೋದರಿ ಕವಿತಾ ಲಂಕೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಅನುಮತಿ ನೀಡಿದೆ.

ಆರೋಪಿ ಮೋಹನ್‌ ನಾಯಕ್‌ ವಿರುದ್ಧ ‘ಕೊಕಾ‘ ಅಡಿ ದಾಖಲಿಸಲಾದ ಆರೋಪವನ್ನು ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ಕವಿತಾ ಲಂಕೇಶ್‌ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎ.ಎಂ. ಖನ್ವಿಲ್ಕರ್‌ ನೇತೃತ್ವದ ತ್ರಿಸದಸ್ಯ ಪೀಠ ಪೂರ್ಣಗೊಳಿಸಿತು.

ADVERTISEMENT

ಆರೋಪಿ ಮೋಹನ್ ನಾಯಕ್ ವಿರುದ್ಧ ‘ಕೋಕಾ‘ ಅಡಿ ತನಿಖೆ ನಡೆಸುವುದಕ್ಕಾಗಿ ಅನುಮತಿ ನೀಡುವಂತೆ ಕೋರಿ ಪೊಲೀಸ್ ಇಲಾಖೆ ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ಆಗಸ್ಟ್ 14, 2018 ರಂದು ರದ್ದುಗೊಳಿಸಿ ತೀರ್ಪು ನೀಡಿತ್ತು.

2017ರ ಸೆ.5 ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದ ಅವರ ನಿವಾಸದೆದುರು ಗೌರಿ ಲಂಕೇಶ್‌ ಅವರನ್ನು ಹತ್ಯೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.