ADVERTISEMENT

GDP growth | ಕುಸಿದ ಜಿಡಿಪಿ ಬೆಳವಣಿಗೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 0:30 IST
Last Updated 1 ಮಾರ್ಚ್ 2023, 0:30 IST
   

ನವದೆಹಲಿ: ಅಕ್ಟೋಬರ್–ಡಿಸೆಂಬರ್ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ಬೆಳವಣಿಗೆ ದರವು ಶೇಕಡ 4.4ಕ್ಕೆ ಇಳಿಕೆ ಕಂಡಿದೆ. ತಯಾರಿಕಾ ವಲಯದಲ್ಲಿನ ಕುಸಿತವು ಇದಕ್ಕೆ ಮುಖ್ಯ ಕಾರಣ.

ಸಾಲದ ಮೇಲಿನ ಬಡ್ಡಿ ದರ ಹೆಚ್ಚಾಗಿದ್ದು ಮಾರುಕಟ್ಟೆಯಲ್ಲಿ ಬೇಡಿಕೆಯ ಮೇಲೆ ಪರಿಣಾಮ ಬೀರಿದೆ. ಇದು ಕೂಡ ಆರ್ಥಿಕ ಬೆಳವಣಿಗೆಯ ಪ್ರಮಾಣವನ್ನು ತಗ್ಗಿಸಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಆರ್ಥಿಕ ಬೆಳವಣಿಗೆಯನ್ನು ಸೂಚಿಸುವ ದೇಶದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಬೆಳವಣಿಗೆ ದರವು ಹಿಂದಿನ ಆರ್ಥಿಕ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಶೇಕಡ 11.2ರಷ್ಟು ಇತ್ತು. ಜಿಡಿಪಿ ಬೆಳವಣಿಗೆ ದರವು ಪ್ರಸಕ್ತ ಆರ್ಥಿಕ ವರ್ಷದ ಜುಲೈ–ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 6.3ರಷ್ಟು ಇತ್ತು.

ADVERTISEMENT

ತಯಾರಿಕಾ ವಲಯದ ಉತ್ಪಾದನೆಯಲ್ಲಿ ಶೇ (–)1.1ರಷ್ಟು ಕುಸಿತ ಕಂಡು ಬಂದಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಈ ವಲಯದಲ್ಲಿ ಶೇ 1.3ರಷ್ಟು ಏರಿಕೆ ದಾಖಲಾಗಿತ್ತು ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ (ಎನ್‌ಎಸ್‌ಒ) ಅಂಕಿ–ಅಂಶಗಳು ಹೇಳಿವೆ.

ತಯಾರಿಕಾ ವಲಯದಲ್ಲಿನ ಕುಸಿತವು ಬೇಡಿಕೆಯು ತಗ್ಗಿರುವುದನ್ನು ಹಾಗೂ ರಫ್ತು ಕಡಿಮೆ ಆಗಿರುವುದನ್ನು ತೋರಿಸುತ್ತಿದೆ. ಜಗತ್ತಿನ ಎಲ್ಲೆಡೆ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿ ದರವನ್ನು ಹೆಚ್ಚಿಸುತ್ತಿರುವ ಕಾರಣ, ಬೇಡಿಕೆ ಕಡಿಮೆ ಆಗಿದೆ.

ಹಣದುಬ್ಬರ ದರ ಹೆಚ್ಚಾಗಿದ್ದುದು ಹಾಗೂ ಬಡ್ಡಿ ದರ ಜಾಸ್ತಿ ಆಗಿದ್ದುದು, ಜನಸಾಮಾನ್ಯರಿಂದ ಬರುವ ಬೇಡಿಕೆ ತಗ್ಗಿದ್ದು ಹಾಗೂ ಸರ್ಕಾರದ ಕಡೆಯಿಂದ ಆಗುವ ವೆಚ್ಚಗಳು ಕಡಿಮೆ ಆಗಿದ್ದು ಕೂಡ ಜುಲೈ–ಸೆಪ್ಟೆಂಬರ್ ತ್ರೈಮಾಸಿಕದ ನಂತರದಲ್ಲಿ ಆರ್ಥಿಕ ಬೆಳವಣಿಗೆಯು ವೇಗ ಕಳೆದುಕೊಂಡಿದ್ದಕ್ಕೆ ಕಾರಣಗಳು.

ಹೆಚ್ಚಿದ ವಿತ್ತೀಯ ಕೊರತೆ

ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು ಜನವರಿಯ ಕೊನೆಯ ವೇಳೆಗೆ ಇಡೀ ಆರ್ಥಿಕ ವರ್ಷದ ಅಂದಾಜಿನ ಶೇಕಡ 67.8ರಷ್ಟಾಗಿದೆ. ವೆಚ್ಚಗಳಲ್ಲಿ ಹೆಚ್ಚಳ ಹಾಗೂ ವರಮಾನ ಸಂಗ್ರಹ ಕಡಿಮೆ ಆಗಿದ್ದು ವಿತ್ತೀಯ ಕೊರತೆ ಹೆಚ್ಚಾಗುವುದಕ್ಕೆ ಕಾರಣ.

ಕೇಂದ್ರದ ವರಮಾನ ಹಾಗೂ ವೆಚ್ಚಗಳ ನಡುವಿನ ಕೊರತೆಯ ಅಂತರವು ಜನವರಿ ಅಂತ್ಯಕ್ಕೆ ₹ 11.9 ಲಕ್ಷ ಕೋಟಿಗೆ ತಲುಪಿದೆ. ಹಿಂದಿನ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ವಿತ್ತೀಯ ಕೊರತೆ ಪ್ರಮಾಣವು ಪರಿಷ್ಕೃತ ಅಂದಾಜಿನ ಶೇ 58.9ರಷ್ಟು ಮಾತ್ರ ಆಗಿತ್ತು.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ವಿತ್ತೀಯ ಕೊರತೆಯು ₹ 17.55 ಲಕ್ಷ ಕೋಟಿ ಆಗಲಿದೆ ಎಂಬುದು ಕೇಂದ್ರದ ಅಂದಾಜು. ಇದು ಜಿಡಿಪಿಯ ಶೇ 6.4ರಷ್ಟು. ವಿತ್ತೀಯ ಕೊರತೆ ಪ್ರಮಾಣವನ್ನು 2025–26ರ ವೇಳೆಗೆ ಶೇ 4.5ಕ್ಕೆ ತಗ್ಗಿಸುವ ಗುರಿಯನ್ನು ಕೇಂದ್ರ ಹೊಂದಿದೆ.

ವಿವಿಧ ಕ್ಷೇತ್ರಗಳ ಬೆಳವಣಿಗೆ

ವಲಯ;2022 ಡಿಸೆಂಬರ್ ತ್ರೈಮಾಸಿಕ;2021 ಡಿಸೆಂಬರ್ ತ್ರೈಮಾಸಿಕ

ಕೃಷಿ;3.7;2.2

ಗಣಿಗಾರಿಕೆ;3.7;5.4

ನಿರ್ಮಾಣ;8.4;0.2

ವಿದ್ಯುತ್, ಅನಿಲ, ನೀರು ಸಂಪರ್ಕ ಇತ್ಯಾದಿ ಸೇವೆಗಳು;8.2;6

ವಾಣಿಜ್ಯ, ಹೋಟೆಲ್, ಸಾರಿಗೆ, ಸಂವಹನ ಇತ್ಯಾದಿ;9.7;9.2

ಹಣಕಾಸು, ರಿಯಲ್ ಎಸ್ಟೇಟ್, ವೃತ್ತಿಪರ ಸೇವೆಗಳು;5.8;4.3

ಸಾರ್ವಜನಿಕ ಆಡಳಿತ, ರಕ್ಷಣೆ, ಇತರ ಸೇವೆಗಳು;2;10.6

ಜಿಡಿಪಿ ಬೆಳವಣಿಗೆ ಪ್ರಮಾಣ (%)

2022 ಡಿಸೆಂಬರ್ ತ್ರೈಮಾಸಿಕ;4.4

2022 ಸೆಪ್ಟೆಂಬರ್ ತ್ರೈಮಾಸಿಕ;6.3

2021 ಡಿಸೆಂಬರ್ ತ್ರೈಮಾಸಿಕ;11.2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.