ADVERTISEMENT

ವಿಮಾನ ಹಾರಾಟ ಸ್ಥಗಿತ | 55 ದಿನ ದೆಹಲಿ ನಿಲ್ದಾಣದಲ್ಲೇ ಉಳಿದಿದ್ದ ಜರ್ಮನ್ ಪ್ರಜೆ

ಏಜೆನ್ಸೀಸ್
Published 12 ಮೇ 2020, 10:19 IST
Last Updated 12 ಮೇ 2020, 10:19 IST
ಜರ್ಮನ್ ಪ್ರಜೆ (ಎಎನ್‌ಐ ಚಿತ್ರ)
ಜರ್ಮನ್ ಪ್ರಜೆ (ಎಎನ್‌ಐ ಚಿತ್ರ)   

ನವದೆಹಲಿ: ದೆಹಲಿಯಿಂದ ನೆದರ್ಸ್‌ಲ್ಯಾಂಡ್‌ನಆರ್ಮಸ್ಟ್ರಡಂಗೆ ಸೋಮವಾರ ಪ್ರಯಾಣಿಸಿದ ಜರ್ಮನಿಯ ವ್ಯಕ್ತಿಯೊಬ್ಬರು ಕಳೆದ 55 ದಿನಗಳಿಂದ ಇಲ್ಲಿನ ಇಂದಿರಾ ಗಾಂಧಿಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಸಿಕ್ಕಿಕೊಂಡಿದ್ದರು ಎಂದು ವರದಿಯಾಗಿದೆ.

ಜರ್ಮನ್‌ ದೇಶದ ಎಡ್ಗರ್‌ ಜೀಬಾಟ್‌ ಎಂಬಾತನೇ ವಿಮಾನ ನಿಲ್ದಾಣದಲ್ಲಿ ಸಿಕ್ಕಿಕೊಂಡಿದ್ದ ವ್ಯಕ್ತಿ. ಅವರು ನೆದರ್ಸ್‌ಲ್ಯಾಂಡ್‌ನ ಕೆಎಲ್‌ಎಂ ಏರ್‌ವೇಸ್‌ವಿಮಾನದಲ್ಲಿ ಆರ್ಮಸ್ಟ್ರಡಂ ಗೆ ಹೊರಟರು.

ಮಾರ್ಚ್‌ 18ರಂದು ಥಾಯ್ಲೆಂಡ್‌ನಿಂದ ದೆಹಲಿಗೆ ಆಗಮಿಸಿದ್ದ ಜೀಬಾಟ್‌, ಇಸ್ತಾಂಬುಲ್‌ಗೆ ತೆರಳಬೇಕಿತ್ತು. ಆದರೆ, ಅಷ್ಟೊತ್ತಿಗಾಗಲೇ, ದೇಶದಲ್ಲಿ ವಿಮಾನ ಹಾರಾಟ ಸ್ಥಗಿತಗೊಳಿಸಿದ್ದರಿಂದ ನಿಲ್ದಾಣದಲ್ಲೇ ಉಳಿಯಬೇಕಾಯಿತು.ಜೀಬಾಟ್‌ ಬಳಿ ಭಾರತೀಯ ವೀಸಾ ಇಲ್ಲದ್ದರಿಂದ ದೇಶದಲ್ಲಿ ಸಂಚರಿಸಲು ಅವರಿಗೆ ಅನುಮತಿ ಸಿಗಲಿಲ್ಲ. ನಿಲ್ದಾಣದ ಆವರಣದಲ್ಲಿಯೇ ಅವರಿಗೆ ಊಟ ಮತ್ತು ಮಲಗಲು ವ್ಯವಸ್ಥೆ ಮಾಡಿಕೊಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ADVERTISEMENT

ಇದೇ ವೇಳೆ ಈ ವಿಚಾರವಾಗಿ ವಿದೇಶಾಂಗ ಸಚಿವಾಲಯವು ಜರ್ಮನ್‌ ರಾಯಭಾರ ಕಚೇರಿಯನ್ನು ಸಂಪರ್ಕಿಸಿತ್ತು.ಜರ್ಮನ್‌ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಜೀಬಾಟ್‌ ಅವರನ್ನು ಭೇಟಿ ಮಾಡಿದ‌್ದರು. ಜರ್ಮನಿಯಲ್ಲಿ ತನ್ನ ವಿರುದ್ಧ ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿರುವುದರಿಂದ, ಜೀಬಾಟ್‌ ಜರ್ಮನಿಗೆ ವಾಪಸ್‌ ಆಗಲು ನಿರಾಕರಿಸಿದ್ದರು.

ಭಾರತದಲ್ಲಿ ಮಾರ್ಚ್‌ 25ರಿಂದಲೇ ಲಾಕ್‌ಡೌನ್‌ ಜಾರಿ ಮಾಡಲಾಗಿದೆ. ಅದಕ್ಕಿಂತ ಕೆಲವು ದಿನಗಳ ಮೊದಲೇ ವಿಮಾನ ಹಾರಾಟ ನಿಲ್ಲಿಸಲಾಗಿತ್ತು. ದೇಶದಾದ್ಯಂತ ಬಹುತೇಕ ಎರಡು ತಿಂಗಳಿನಿಂದ ವಿಮಾನಯಾನ ಸ್ಥಗಿತಗೊಂಡಿತ್ತು.

ವಿದೇಶಗಳಲ್ಲಿ ಸಿಲುಕಿಕೊಂಡಿರುವ ಜನರನ್ನು ರಕ್ಷಿಸಿ ಸ್ಥಳಾಂತರಿಸುವ ಸಲುವಾಗಿ ಭಾರತ ಮತ್ತೆ ವಿಮಾನ ಹಾರಾಟ ಆರಂಭಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.