ADVERTISEMENT

ಗಾಜಿಯಾಬಾದ್ ಆಸ್ಪತ್ರೆಯಲ್ಲಿ ರೋಗಿಗಳ ಅಸಭ್ಯ ವರ್ತನೆ; ಸಿಬ್ಬಂದಿಗಳಿಂದ ದೂರು

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 10:33 IST
Last Updated 3 ಏಪ್ರಿಲ್ 2020, 10:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗಾಜಿಯಾಬಾದ್: ದೆಹಲಿಯಲ್ಲಿ ನಡೆದ ತಬ್ಲಿಗಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉತ್ತರ ಪ್ರದೇಶದ ಜನರನ್ನು ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಈ ಮಧ್ಯೆ ಗಾಜಿಯಾಬಾದ್‌ನ ಎಂಎಂಜಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿರುವ ಐದು ರೋಗಿಗಳು ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆಸ್ಪತ್ರೆಯ ನರ್ಸ್‌ಗಳು ಚೀಫ್ ಮೆಡಿಕಲ್ ಸುಪರಿಟೆಂಡೆಂಟ್‌ಗೆ ದೂರು ಸಲ್ಲಿಸಿದ್ದಾರೆ. ಈ ಪೈಕಿ ಒಬ್ಬ ವ್ಯಕ್ತಿಗೆ ಕೋವಿಡ್ ರೋಗ ದೃಢ ಪಟ್ಟಿದ್ದು ಅವರನ್ನು ಐಸೋಲೇಷನ್‌ ವಾರ್ಡ್‌ನಲ್ಲಿರಿಸಲಾಗಿದೆ.

ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ ಈ ವಿಷಯವನ್ನು ಮುಖ್ಯ ವೈದ್ಯಾಧಿಕಾರಿ, ಜಿಲ್ಲಾ ಮೆಜಿಸ್ಟ್ರೇಟ್ ಮತ್ತು ಪೊಲೀಸ್ ಅಧಿಕಾರಿಯವರ ಗಮನಕ್ಕೆ ತರಲಾಗಿದೆ.

ಐದು ರೋಗಿಗಳನ್ನು ಐಸೋಲೇಷನ್ ವಾರ್ಡ್‌ಗೆ ದಾಖಲಿಸಲಾಗಿದ್ದು, ಅವರು ನರ್ಸ್ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ. ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ವ್ಯಕ್ತಿಗಳಾಗಿದ್ದಾರೆ ಇವರು. ಈ ರೋಗಿಗಳು ಸರಿಯಾಗಿ ಬಟ್ಟೆ ತೊಟ್ಟುಕೊಳ್ಳದೆ ಆಸ್ಪತ್ರೆಯಲ್ಲಿ ಓಡಾಡಿದ್ದಾರೆ. ಅಲ್ಲಿನ ನರ್ಸ್‌ಗಳ ಬಗ್ಗೆ ಅಸಭ್ಯ ಮಾತುಗಳನ್ನಾಡಿ, ಅಶ್ಲೀಲಹಾಡುಗಳನ್ನು ಹಾಡಿದ್ದಾರೆ. ಇಷ್ಟೇ ಅಲ್ಲದ ಸಿಗರೇಟು ಬೇಕು ಎಂದು ಒತ್ತಾಯಿಸಿದ್ದಾರೆ. ವೈದ್ಯರು ಕೊಟ್ಟ ಔಷಧಿಗಳನ್ನು ಇವರು ಸೇವಿಸುತ್ತಿಲ್ಲ. ಅಂತರ ಕಾಪಾಡಿ ಎಂದು ಹೇಳುತ್ತಿದ್ದರೂ ಇವರು ಆಸ್ಪತ್ರೆಯ ಸಿಬ್ಬಂದಿಗಳ ಹತ್ತಿರ ಬರುತ್ತಾರೆ, ಆಸ್ಪತ್ರೆಯಲ್ಲಿ ಒಟ್ಟಿಗೆ ಒಂದೇ ಹಾಸಿಗೆಯಲ್ಲಿ ಕುಳಿತು ಹರಟುತ್ತಾರೆ.

ADVERTISEMENT

ಆಸ್ಪತ್ರೆಯ ಸಿಬ್ಬಂದಿಗಳ ದೂರು ಪ್ರಕಾರ ನಾನು ಮುಖ್ಯ ವೈದ್ಯಾಧಿಕಾರಿಗೆ ವಿಷಯ ತಿಳಿಸಿದ್ದೇನೆ. ನರ್ಸ್‌ಗಳು ಹಗಲು ಇರುಳೆನ್ನದೆ ಕಷ್ಟ ಪಟ್ಟು ಕೆಲಸಮಾಡುತ್ತಿದ್ದಾರೆ. ಹೀಗಿರುವಾಗ ರೋಗಿಗಳ ಈ ರೀತಿಯ ವರ್ತನೆ ಬೇಸರ ತಂದಿದೆ. 6 ನರ್ಸ್‌ಗಳು ರೋಗಿಗಳ ವಿರುದ್ಧ ದೂರು ನೀಡಿದ್ದಾರೆ ಎಂದು ಆಸ್ಪತ್ರೆಯ ಚೀಫ್ ಮೆಡಿಕಲ್ ಸುಪರಿಟೆಂಡೆಂಟ್ ಡಾ.ರವೀಂದ್ರ ರಾಣಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.