ADVERTISEMENT

ಗೋವಾ ವಿಧಾನಸಭಾ ಚುನಾವಣೆ: ‘ಕಮಲ’ದ ಹಾದಿ ಕಷ್ಟ, ‘ಕೈ’ಗೆ ನಿರೀಕ್ಷೆ

ಪಿಟಿಐ
Published 10 ಜನವರಿ 2022, 20:00 IST
Last Updated 10 ಜನವರಿ 2022, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಣಜಿ: ಕರಾವಳಿ ರಾಜ್ಯ ಗೋವಾ ದಲ್ಲಿ ಒಂದು ತಿಂಗಳಲ್ಲಿ ನಡೆಯ ಲಿರುವ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೆ ಮರಳುವ ಬಿಜೆಪಿಯ ಕನಸು ನನಸಾಗುವುದು ಕಷ್ಟ. ಕಾಂಗ್ರೆಸ್ ಪಕ್ಷವೇ ಮತ್ತೆ ಮುನ್ನೆಲೆಗೆ ಬರಬಹುದು. ಈ ಬಾರಿ ಚುನಾವಣಾ ಕಣ ರಂಗೇರುವಂತೆ ಮಾಡಿರುವ ತೃಣಮೂಲ ಕಾಂಗ್ರೆಸ್‌ ಪಕ್ಷದ ಬಗ್ಗೆ ಜನರಿಗೆ ಅಂತಹ ಒಲವು ಇಲ್ಲ ಎಂದು ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದಾರೆ.

‘40 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಪಕ್ಷವು ಸುಮಾರು 20 ಕ್ಷೇತ್ರಗಳನ್ನು ಗೆಲ್ಲಬಹುದು. ಬಿಜೆಪಿ ಬಲ 15ಕ್ಕೆ ಸೀಮಿತವಾಗಬಹುದು. ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷವು (ಎಂಜಿಪಿ) 3–4 ಕ್ಷೇತ್ರಗಳಲ್ಲಿ ಗೆದ್ದರೆ ಎಎಪಿಗೆ ಎರಡು ಕ್ಷೇತ್ರಗಳು ದೊರಕಬಹುದು ಎಂದು ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ.

ಗೋವಾದ ಮೊದಲ ಮುಖ್ಯಮಂತ್ರಿ ದಯಾನಂದ ಬಾಂದೋಡ್ಕರ್‌ ಅವರ ನೇತೃತ್ವದಲ್ಲಿ ಪಕ್ಷವು ಪ್ರವರ್ಧಮಾನಕ್ಕೆ ಬಂದಿತ್ತು. ಆದರೆ, ಈಗ ಪಕ್ಷದ ಬಲ ಕುಂದಿದೆ. ತೃಣಮೂಲ ಕಾಂಗ್ರೆಸ್ ಜತೆಗೆ ಪಕ್ಷವು ಮೈತ್ರಿ ಮಾಡಿಕೊಂಡಿದೆ. ಎಂಜಿಪಿ ಏಕಾಂಗಿಯಾಗಿ ಸ್ಪರ್ಧಿಸಿದ್ದರೆ ಬಹಳ ಕಷ್ಟಪಡಬೇಕಾಗುತ್ತಿತ್ತು. ತೃಣಮೂಲ ಕಾಂಗ್ರೆಸ್‌ನ ಹಣ ಬಲವು ಎಂಜಿಪಿಗೆ ನೆರವಾಗಲಿದೆ ಎಂದು ರಾಜ್ಯದ ನಿವೃತ್ತ ಚುನಾವಣಾ ಆಯುಕ್ತ ಪ್ರಭಾಕರ ಟಿಂಬ್ಲೊ ಹೇಳಿದ್ದಾರೆ.

ADVERTISEMENT

ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ತೀವ್ರವಾಗಿದೆ. ಅದು ಬಿಜೆಪಿಗೆ ಮಾರಕವಾಗಿ ಪರಿಣಮಿಸಲಿದೆ. ಕಾಂಗ್ರೆಸ್‌ ಪಕ್ಷವು ಸರ್ಕಾರ ರಚಿಸಲಿದೆ ಎಂದು ಟಿಂಬ್ಲೊ ಅಂದಾಜಿಸಿದ್ಧಾರೆ.

ಚಲಾವಣೆ ಕಳೆದುಕೊಂಡವರಿಗೆ ಕಾಂಗ್ರೆಸ್‌ ಪಕ್ಷವು ಮಹತ್ವ ಕೊಡ ಬಾರದು. ಟಿಎಂಸಿ ಮತ್ತು ಎಎಪಿಯ ಪರಿಣಾಮವು ತೀವ್ರವಾಗಿ ಇರುವುದಿಲ್ಲ ಎಂದು ಟಿಂಬ್ಲೊ ಹೇಳಿದ್ದಾರೆ.

ಆದರೆ, ರಾಜಕೀಯ ವಿಶ್ಲೇಷಕ ಮತ್ತು ಬಿಜೆಪಿ ಬೆಂಬಲಿಗ ಗಿರಿರಾಜ್‌ ಪೈ ವೆರ್ನೇಕರ್‌ ಅವರು ಭಿನ್ನ ಅಭಿಪ್ರಾಯ ಹೊಂದಿದ್ದಾರೆ. ‘ಬಿಜೆಪಿಗೆ ಆಡಳಿತ ವಿರೋಧಿ ಅಲೆಯ ಭೀತಿ ಇಲ್ಲ. ಏಕೆಂದರೆ, ರಾಜ್ಯದ ಅಭಿವೃದ್ಧಿಗೆ ಡಬಲ್‌ ಎಂಜಿನ್‌ ಸರ್ಕಾರ ಬೇಕು ಎಂಬುದು ಜನರಿಗೆ ತಿಳಿದಿದೆ. ಇಲ್ಲದೇ ಇದ್ದರೆ ಪಶ್ಚಿಮ ಬಂಗಾಳದಲ್ಲಿ ಆದಂತೆ ಕೇಂದ್ರ ಮತ್ತು ರಾಜ್ಯದ ಸಂಘರ್ಷ ಏರ್ಪಡು ತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿಯ ವಿರುದ್ಧ ಮತ್ತು ಕಾಂಗ್ರೆಸ್‌–ಗೋವಾ ಫಾರ್ವರ್ಡ್ ಪಾರ್ಟಿಯ (ಜಿಎಫ್‌ಪಿ) ಪರ ಭಾರಿ ಅಲೆ ಸೃಷ್ಟಿಯಾಗಿದೆ ಎಂದು ಜಿಎಫ್‌ಪಿ ಪ್ರಧಾನ ಕಾರ್ಯದರ್ಶಿ ದುರ್ಗಾದಾಸ್‌ ಕಾಮತ್‌ ಹೇಳಿದ್ದಾರೆ. ಕಾಂಗ್ರೆಸ್‌ ಮತ್ತು ಜಿಎಫ್‌ಪಿ ಮೈತ್ರಿ ಮಾಡಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.