ADVERTISEMENT

ಗೋವಾ: ಎಂಜಿಪಿ ತ್ಯಜಿಸಿದ ಶಾಸಕ ಸಂಪುಟಕ್ಕೆ

ಉಪಮುಖ್ಯಮಂತ್ರಿ ಸುದಿನ್‌ ಧವಳೀಕರ್‌ಗೆ ಕೊಕ್

ಪಿಟಿಐ
Published 27 ಮಾರ್ಚ್ 2019, 19:58 IST
Last Updated 27 ಮಾರ್ಚ್ 2019, 19:58 IST

ಪಣಜಿ: ಗೋವಾದಲ್ಲಿ ಬುಧವಾರ ತಡರಾತ್ರಿ ದಿಢೀರ್ ರಾಜಕೀಯ ಬೆಳವಣಿಗೆ ನಡೆದಿದೆ. ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ (ಎಂಜಿಪಿ) ತ್ಯಜಿಸಿ ಬಿಜೆಪಿ ಸೇರಿದ ಕೆಲವೇ ಗಂಟೆಗಳಲ್ಲಿ ಶಾಸಕ ದೀಪಕ್‌ ಪಾವಸ್ಕರ್‌ ಅವರನ್ನು ಬುಧವಾರ ರಾತ್ರಿ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.

ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರು ಉಪಮುಖ್ಯಮಂತ್ರಿ ಸುದಿನ್‌ ಧವಳೀಕರ್‌ ಅವರನ್ನು ಸಂಪುಟದಿಂದ ತೆಗೆದು ಹಾಕಿದ್ದಾರೆ.

ಧವಳೀಕರ್‌ ಸೇರಿ ಮೂವರು ಶಾಸಕರನ್ನು ಹೊಂದಿದ್ದ ಎಂಜಿಪಿ ಹೋಳಾಗಿದೆ. ಪಾವಸ್ಕರ್‌ ಮತ್ತು ಇನ್ನೊಬ್ಬ ಶಾಸಕ ಮನೋಹರ್‌ ಅಜಗಾಂವಕರ್‌ ಬುಧವಾರ ಬೆಳಿಗ್ಗೆ ಬಿಜೆಪಿ ಸೇರಿದ್ದರು. ಬಿಜೆಪಿಯೊಳಗೆ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ ವಿಲೀನಗೊಂಡಿದೆ ಎಂದು ಸಭಾಧ್ಯಕ್ಷ ಮೈಕೆಲ್‌ ಲೋಬೊ ಅವರಿಗೆ ಪತ್ರ ಸಲ್ಲಿಸಿದ್ದರು. ಆದರೆ, ಧವಳೀಕರ್‌ ಈ ಪತ್ರಕ್ಕೆ ಸಹಿ ಹಾಕಿಲ್ಲ. ಎಂಜಿಪಿಯಲ್ಲೇ ಮುಂದುವರಿದಿರುವ ಧವಳೀಕರ್‌ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ.

ADVERTISEMENT

ರಾಜ್ಯಪಾಲರಾದ ಮೃದುಲಾ ಸಿನ್ಹಾ ಅವರು ರಾತ್ರಿ 11.35ಕ್ಕೆ ರಾಜಭವನದಲ್ಲಿ ಪಾವಸ್ಕರ್‌ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಧವಳೀಕರ್‌ ಅವರಿಗೆ ನೀಡಿದ್ದ ಸಾರಿಗೆ ಮತ್ತು ಲೋಕೋಪಯೋಗಿ ಖಾತೆಗಳನ್ನು ಮುಖ್ಯಮಂತ್ರಿ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.

ಪ್ರಥಮ ಬಾರಿ ಶಾಸಕರಾಗಿರುವ ಪಾವಸ್ಕರ್‌ ಅವರು, ಪ್ರಸ್ತುತ ಸರ್ಕಾರಿ ಸ್ವಾಮ್ಯದ ಗೋವಾ ರಾಜ್ಯ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದಾರೆ. ಅಜಗಾಂವಕರ್‌ ಅವರು ಪ್ರವಾಸೋದ್ಯಮ ಸಚಿವರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.